ಮಂಗಳೂರು : ತನ್ನ ಮನೆಯಿಂದ ಹೊರಹೋಗಿದ್ದ ಯುವಕನೋರ್ವ 2 ದಿನಗಳ ಬಳಿಕ ಸಸಿಹಿತ್ಲು ನದಿ ಕಿನಾರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ. ಯುವಕನ ಸಾವಿನ ಬಗ್ಗೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸುರತ್ಕಲ್ ಸಮೀಪದ ಕೃಷ್ಣಾಪುರ ಕ್ರಾಸ್ ನಿವಾಸಿ ಹಾಜಿ ಮುಹಮ್ಮದ್ ಶರೀಫ್ ಪುತ್ರ ಮುಹಮ್ಮದ್ ಫಹಾದ್ ಝಮೀರ್(18) ಮೃತ ಯುವಕ.
ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಫಹಾದ್ ಭೋಪಾಲ್ಗೆ ತರಬೇತಿಗೂ ಹೋಗಿದ್ದನು. ಲಾಕ್ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಈತ ಸ್ವಿಗ್ಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದನು. ಜೂನ್ 19 ರ ಶನಿವಾರ ರಾತ್ರಿ ತನ್ನ ಅಣ್ಣನ ಸ್ನೇಹಿತನ ಬೈಕ್ನಲ್ಲಿ ಮನೆಯಿಂದ ಹೊರಟಿದ್ದ ಫಹಾದ್ ಮರಳಿ ಬಂದಿರಲಿಲ್ಲ. ಜೂ.21 ರಂದು ಬೆಳಗ್ಗೆ ಸಸಿಹಿತ್ಲು ಸಮೀಪದ ರುದ್ರಭೂಮಿಯ ಹಿಂಬದಿಯ ಖಂಡಿಗೆ ಸೇತುವೆಯ ಬಳಿ ಮೊಬೈಲ್ ಸಹಿತ ಬೈಕೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹುಡುಕಾಡಿದಾಗ ನದಿ ಕಿನಾರೆಯಲ್ಲಿ ಯುವಕನ ಮೃತದೇಹವೊಂದು ಗುರುತು ಸಿಗಲಾರದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಜೂ.19 ರಂದು ರಾತ್ರಿಯಿಂದ ಕಾಣೆಯಾಗಿದ್ದ ಕೃಷ್ಣಾಪುರ ಕ್ರಾಸ್ ನಿವಾಸಿ ಫಹಾದ್ನ ಮೃತದೇಹ ಎಂಬುದಾಗಿ ಗುರುತಿಸಲಾಯಿತು.
ಫಹಾದ್ ಅಸಹಜ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈತ ಶನಿವಾರ ರಾತ್ರಿ ಮುಕ್ಕ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ತನ್ನ ಸಹೋದರನಿಗೆ ತಾನು ಮನೆಗೆ ಬರುತ್ತಿರುವುದಾಗಿ ಕರೆ ಮಾಡಿ ತಿಳಿಸಿದ್ದಾನೆ. ಹಾಗಾಗಿ ಫಹಾದ್ನ ಸಾವಿನ ಬಗ್ಗೆ ಸರಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.