ಕಾರ್ಕಳ: ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಕಾರ್ಕಳದ ಪಳ್ಳಿ ಅಡಪಾಡಿ ಬಳಿ ಸಂಭವಿಸಿದೆ.
ಹಿರಿಯಡ್ಕದ ಕುಜಂಬೈಲು ನಿವಾಸಿ ಗಣೇಶ್ ನಾಯಕ್ (27) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ಗಣೇಶ್ ನಾಯಕ್ ಅವರು ತಮ್ಮ ಮೋಟಾರ್ ಸೈಕಲ್ನಲ್ಲಿ ಹಂಪನಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಡಪಾಡಿ ಸಮೀಪ ಹಿಂಬದಿಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿಯು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಣೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ.
ದುರದೃಷ್ಟವಶಾತ್, ಗಣೇಶ್ ಅವರ ತಲೆಯ ಮೇಲೆ ಟಿಪ್ಪರ್ ಲಾರಿಯ ಹಿಂಬದಿಯ ಚಕ್ರ ಹರಿದಿದೆ. ಗಣೇಶ್ ಅವರು ಹೆಲ್ಮೆಟ್ ಧರಿಸಿದ್ದರೂ ಸಹ, ಟಿಪ್ಪರ್ ಚಕ್ರ ತಲೆಯ ಮೇಲೇ ಹರಿದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದು, ಟಿಪ್ಪರ್ ಚಾಲಕನ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


























