ಬೆಳಗಾವಿ: ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿದ್ದ 15 ದಿನದ ನವಜಾತ ಶಿಶುವಿನ ಸಾವಿನ ಪ್ರಕರಣಕ್ಕೆ ಈಗ ಭಯಾನಕ ತಿರುವು ಸಿಕ್ಕಿದೆ. ಮಗು ಸಹಜವಾಗಿ ಸಾವನ್ನಪ್ಪಿಲ್ಲ, ಬದಲಾಗಿ ಸ್ವಂತ ತಂದೆಯೇ ಮಗುವಿಗೆ ವಿಷ ನೀಡಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೆಣ್ಣು ಮಗು ಹುಟ್ಟಿತು ಎಂಬ ಏಕೈಕ ಕಾರಣಕ್ಕೆ ಈ ಕ್ರೂರಿ ತಂದೆ ಇಂತಹ ಕೃತ್ಯ ಎಸಗಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಬೆಳಗಾವಿಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಭೀಮರಾಯ್ ಚಿಪ್ಪಾಡಿ ಹಾಗೂ ಶೀಲಾ ಚಿಪ್ಪಾಡಿ ದಂಪತಿಗೆ 15 ದಿನಗಳ ಹಿಂದಷ್ಟೇ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ‘ಪ್ರಿಯಾಂಕಾ’ ಎಂದು ಹೆಸರಿಡಲಾಗಿತ್ತು. ತನಗೆ ಹೆಣ್ಣು ಮಗು ಬೇಡ ಎಂಬ ಕಾರಣಕ್ಕೆ ತಂದೆ ಭೀಮರಾಯ್ ಮಗುವನ್ನು ಕೊಲ್ಲಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಮಗು ದಿಢೀರ್ ಸಾವನ್ನಪ್ಪಿದಾಗ ತಾಯಿ ಶೀಲಾ ಅವರಿಗೆ ಪತಿಯ ಮೇಲೆ ಅನುಮಾನ ಮೂಡಿತ್ತು. ನನ್ನ ಗಂಡನೇ ಮಗುವಿಗೆ ವಿಷ ಪ್ರಾಶನ ಮಾಡಿಸಿ ಕೊಲೆ ಮಾಡಿದ್ದಾರೆ ಎಂದು ಅವರು ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಭೀಮರಾಯ್‌ನ ಅಸಲಿ ಬಣ್ಣ ಬಯಲಾಗಿದೆ. ತನಿಖೆಯ ವೇಳೆ ತಾನೇ ಮಗುವನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು, ತನಿಖೆಯಲ್ಲಿ ಮಗುವಿನ ಕೊಲೆ ನಡೆದಿರುವುದು ದೃಢಪಟ್ಟಿದೆ. ಆರೋಪಿ ಭೀಮರಾಯ್ ಚಿಪ್ಪಾಡಿಯನ್ನು ಈಗಾಗಲೇ ಬಂಧಿಸಲಾಗಿದೆ. ಹೆಣ್ಣು ಮಗು ಎಂಬ ದ್ವೇಷದಿಂದ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇಂದಿನ ಕಾಲದಲ್ಲೂ ಹೆಣ್ಣು ಮಗು ಎಂಬ ಕಾರಣಕ್ಕೆ ಹುಟ್ಟಿದ 15 ದಿನದ ಹಸುಗೂಸನ್ನು ಕೊಲ್ಲುವ ಮಾನಸಿಕತೆ ಸಮಾಜಕ್ಕೆ ಕಳಂಕವಾಗಿದೆ. ಪ್ರೀತಿಯಿಂದ ಮಗುವನ್ನು ಸಾಕಬೇಕಿದ್ದ ತಂದೆಯೇ ಕಾಲನ ರೂಪದಲ್ಲಿ ಬಂದಿದ್ದು ದುರಾದೃಷ್ಟಕರ. ಸದ್ಯ ಆರೋಪಿ ಭೀಮರಾಯ್ ಜೈಲು ಕಂಬಿ ಎಣಿಸುತ್ತಿದ್ದಾನೆ.



























