ಚಂಡಿಗಢ: ಖ್ಯಾತ ಗಾಯಕಿಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
ಖ್ಯಾತ ಪಂಜಾಬಿ ಗಾಯಕಿ ಯಶಿಂದರ್ ಕೌರ್ (29) ಅವರ ಮೃತದೇಹ ಪಂಜಾಬ್‌ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ.
‘ಇಂದರ್ ಕೌರ್’ ಎಂದೇ ಜನಪ್ರಿಯರಾಗಿದ್ದ ಈ ಗಾಯಕಿ ಮೇ 13ರಿಂದ ನಾಪತ್ತೆಯಾಗಿದ್ದರು ಎಂದು ವರದಿ ತಿಳಿಸಿದೆ. ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕಾಲುವೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮೃತದೇಹ ಯಶಿಂದರ್ ಕೌರ್ ಅವರದ್ದೇ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.
ಸದ್ಯ ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಮೃತದೇಹವನ್ನು ಸಮ್ರಾಲಾದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಮೇ 13 ರ ಸಂಜೆ ಗಾಯಕಿ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೋ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ತಡರಾತ್ರಿಯಾದರೂ ಅವರು ಮನೆಗೆ ಹಿಂತಿರುಗಿಲ್ಲ. ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗದಿದ್ದಾಗ, ಪೊಲೀಸರ ಮೊರೆ ಹೋಗಿದ್ದಾರೆ.
ಈ ಸಂಬಂಧ ಗಾಯಕಿಯ ಸಹೋದರ ಜೋತಿಂದರ್ ಸಿಂಗ್ ನೀಡಿದ ದೂರಿನ ಮೇರೆಗೆ ಮೇ 15 ರಂದು ಮೊಗಾ ನಿವಾಸಿ ಸುಖವಿಂದರ್ ಸಿಂಗ್ (ಸುಖಾ) ಮತ್ತು ಆತನ ಸಹಚರ ಕರಮ್‌ಜೀತ್ ಸಿಂಗ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಪೊಲೀಸ್ ತನಿಖೆಯ ವೇಳೆ, ಗಾಯಕಿ ಇಂದರ್ ಕೌರ್ ಅವರಿಗೆ ಮೊಗಾ ಜಿಲ್ಲೆಯ ಭಲೂರ್ ಗ್ರಾಮದ ಸುಖವಿಂದರ್ ಸಿಂಗ್ ಎಂಬಾತನ ಪರಿಚಯವಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಸುಖವಿಂದರ್ ಸಿಂಗ್ ಇಂದರ್ ಕೌರ್ ಅವರನ್ನು ಮದುವೆಯಾಗಲು ಬಯಸಿದ್ದ. ಆದರೆ ಗಾಯಕಿ ಇದು ಇಷ್ಟವಿರಲಿಲ್ಲ ಎನ್ನಲಾಗಿದೆ.
ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಆರೋಪಿಗಳು ಗಾಯಕಿಯನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿ, ಬಳಿಕ ಕೊಲೆ ಮಾಡಿ ಕಾಲುವೆಗೆ ಎಸೆದಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ವರದಿಗಳ ಪ್ರಕಾರ, ಈ ಕೃತ್ಯ ಎಸಗಿದ ಬೆನ್ನಲ್ಲೇ ಮುಖ್ಯ ಆರೋಪಿ ಸುಖವಿಂದರ್ ಸಿಂಗ್ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದು,ಇತ್ತೀಚೆಗಷ್ಟೇ ಕೆನಡಾದಿಂದ ಪಂಜಾಬ್‌ಗೆ ಮರಳಿದ್ದ ಎನ್ನಲಾಗಿದೆ.
ಸದ್ಯ ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಶಿಂದರ್ ಕೌರ್ ಪಂಜಾಬಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಎಂದು ವರದಿ ತಿಳಿಸಿದೆ.


























