ಬೆಳ್ತಂಗಡಿ: ಮನೆಯಲ್ಲಿದ್ದ ಹೋರಿ ಹಾಯ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆಗೆ ಸಂಬಂಧಿಸಿ ವೈದ್ಯರ ನಿರ್ಲಕ್ಷ್ಯದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಳ್ತಂಗಡಿ ಗೇರುಕಟ್ಟೆ ನಿವಾಸಿ ನಾಸಿರುದ್ದೀನ್ ಪಿ. ಬಿನ್ ಸೂಫಿ ಬ್ಯಾರಿ (36) ಅವರು ನೀಡಿದ ದೂರಿನ ಪ್ರಕಾರ, ಅವರ ಸಹೋದರ ಮಹಮ್ಮದ್ ಶರೀಫ್ ಪಿ. (35) ಅವರು ಮೇ 14ರ ರಾತ್ರಿ ಮನೆಯಲ್ಲಿದ್ದ ಹೋರಿ ಹಾಯ್ದು ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದರಿಂದ ಮಹಮ್ಮದ್ ಶರೀಫ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಅವರನ್ನು ಮೇ 16ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 20ರಂದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ 28/2026 ಅಡಿಯಲ್ಲಿ, ಬಿ.ಎನ್.ಎಸ್.ಎಸ್ 2023ರ ಕಲಂ 194(3)(iv) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದಲ್ಲದೆ, ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ವೈದ್ಯಕೀಯ ತಂಡ ರಚಿಸುವಂತೆ ಸಂಬಂಧಿತ ಇಲಾಖೆಗೆ ಪತ್ರ ಬರೆಯಲಾಗಿದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.



























