ಪುತ್ತೂರು: ಪುತ್ತೂರು ತಾಲೂಕಿನ ನೆಲ್ಲಿಕಟ್ಟೆಯ ಮುನ್ನ ಬಿಲ್ಡಿಂಗ್‌ನಲ್ಲಿ ಇರುವ ರೋಲ್ ಮಾರ್ಕ್ಸ್ ಸ್ಟುಡಿಯೋದ ಮಾಲೀಕ ವಸಂತ ನಾಯ್ಕ ಅವರು ತಮ್ಮ ಕಾರಿಗೆ ಹಾನಿ ಮಾಡಿರುವ ಬಗ್ಗೆ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಮನೆಯ ಅಂಗಳದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಕಾರನ್ನು ಸ್ಟುಡಿಯೋದ ಮುಂಭಾಗದಲ್ಲಿ ನಿಲ್ಲಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೆಲ್ಲಿಕಟ್ಟೆಯ ಉತ್ತಮ್ ಎಂಬವರು ರಾತ್ರಿ ಸುಮಾರು 9 ಗಂಟೆ ವೇಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ ವಸಂತ ನಾಯ್ಕ ಅವರು ಮನೆಗೆ ತೆರಳಿದ ನಂತರ ರಾತ್ರಿ ಸುಮಾರು 10:52 ಗಂಟೆ ವೇಳೆಗೆ ಅವರ ಕಾರಿಗೆ ಹಾನಿ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರಿಗೆ ಹಾನಿ ಉಂಟುಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಉಂಟಾದ ನಷ್ಟವನ್ನು ಭರಿಸುವಂತೆ ಮಾಡಬೇಕೆಂದು ವಸಂತ ನಾಯ್ಕ ಅವರು ಪುತ್ತೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.


























