ಪುತ್ತೂರು:ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ ಸಚಿನ್ ರೈ ಅವರ ಸಾವಿನ ಕುರಿತು ಸಂಶಯ ಇರುವುದಾಗಿ ಅವರ ತಾಯಿ ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ: 16/2026 5: 194 (3) (iv) BNSS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸಚಿನ್ ರೈ ಅವರು ಸುಮಾರು 10 ವರ್ಷಗಳಿಂದ ಪುತ್ತೂರಿನಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದವರು ಕಳೆದ 5 ವರ್ಷಗಳಿಂದ ಇಲ್ಲಿನ ಕಲ್ಲಿಮಾರು ಎಂಬಲ್ಲಿ ಆಜಯ್‌ನಾಥ್ ಶೆಟ್ಟಿ ಎಂಬವರ ಮನೆಯಲ್ಲಿ ವಾಸವಾಗಿದ್ದರು.
‘ಜು.5ರಂದು ಬೆಳಿಗ್ಗೆ ಅಜಯ್‌ನಾಥ್ ಅವರ ತಾಯಿ ಗೀತಾ ಶೆಟ್ಟಿಯವರು ನನಗೆ ಕರೆ ಮಾಡಿ ಮಗ ಸಚಿನ್ ಬಾತ್ ರೂಮ್ ನಲ್ಲಿ ಬಿದ್ದು ಅಸ್ವಸ್ಥಗೊಂಡಿದ್ದಾರೆ.ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿರುವುದಾಗಿ ಮಾಹಿತಿ ನೀಡಿದ್ದರು.
ಆಸ್ಪತ್ರೆಗೆ ಬಂದಾಗ ಸಚಿನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮಗನ ಸಾವಿನಲ್ಲಿ ಸಂಶಯವಿರುವುದಾಗಿ’ ಅವರ ತಾಯಿ ಬೆಳ್ತಂಗಡಿ ಮಡಂತ್ಯಾರು ಪಾರೆಂಕಿ ನಿವಾಸಿ ಗುಲಾಬಿ ರೈ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳ ಹಿಂದೆ ಕೆಯ್ಯೂರಿನಲ್ಲಿ ವಾಸವಾಗಿದ್ದ ಗುಲಾಬಿ ರೈ ಕುಟುಂಬ ಪ್ರಸ್ತುತ ಮಡಂತ್ಯಾರು ಪಾರೆಂಕಿಯಲ್ಲಿ ಗುಲಾಬಿ ರೈಯವರ ತಾಯಿಯ ಜಮೀನಿನಲ್ಲಿ ಮನೆ ಮಾಡಿ ವಾಸವಿದ್ದಾರೆ. ಗುಲಾಬಿ ರೈ ಮತ್ತು ಮಗಳು ಶಬರಿ ರೈಯವರು ಪಾರೆಂಕಿಯಲ್ಲಿ ವಾಸವಿದ್ದು ಸಚಿನ್ ರೈಯವರು ಕಳೆದ ಐದು ವರ್ಷಗಳಿಂದ ಪಾರೆಂಕಿ ಮನೆಗೆ ಹೋಗದೆ ಪುತ್ತೂರಿನಲ್ಲಿಯೇ ವಾಸ್ತವ್ಯವಿದ್ದರು ಎಂದು ತಿಳಿದು ಬಂದಿದೆ.

























