ಮಂಗಳೂರು : ನಗರದ ಲಾಡ್ಜ್ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುದ್ರೋಳಿ ನಿವಾಸಿ ಶೇಖ್ ಝೈನ್ ಮೊಹಮ್ಮದ್, ಬೋಳಾರ ನಿವಾಸಿ ಮೊಹಮ್ಮದ್ ರಹೀಂ ಹಾಗೂ ಸುರತ್ಕಲ್ ಯುವತಿ ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಅಪ್ರಾಪ್ತ ವಯಸ್ಸಿನ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರಿಂದ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಲಾಕ್ ಡೌನ್ ಇದ್ದರೂ ಅದನ್ನು ಉಲ್ಲಂಘಿಸಿ ಸುತ್ತಾಡಿರುವುದರಿಂದ ಮತ್ತು ಲಾಡ್ಜ್ ಗೆ ತೆರಳಿದ್ದರಿಂದ ಸಾಂಕ್ರಾಮಿಕ ರೋಗ ತಡೆಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ ಭಾನುವಾರ ವೀಕೆಂಡ್ ಕರ್ಫ್ಯೂ ಇದ್ದರೂ ಯುವತಿಯರು ಹಾಗೂ ಯುವಕರು ಲಾಡ್ಜಿನಲ್ಲಿ ಬೇರೆ ಬೇರೆ ಅವಧಿಯಲ್ಲಿ ಪ್ರತ್ಯೇಕ ರೂಮ್ ಗಳನ್ನು ಬುಕ್ ಮಾಡಿಕೊಂಡಿದ್ದರು. ಇದು ಕೆಲವು ಸಂಘಟನೆಗಳ ಗಮನಕ್ಕೆ ಬಂದಿತ್ತು ಹಾಗಾಗಿ ಪೊಲೀಸರು ತೆರಳಿ ಅಪ್ರಾಪ್ತ ಯುವತಿಯನ್ನು ರಕ್ಷಿಸಿ ಉಳಿದ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದರು. ಬಂಧಿತರಲ್ಲಿ ಓರ್ವ ಆರೋಪಿಗೆ ಡ್ರಗ್ಸ್ ಸೇವನೆಯ ಚಟ ಇತ್ತು ಎನ್ನಲಾಗಿದೆ.