ಪುತ್ತೂರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕದಲ್ಲಿ ಏರ್ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಆರೋಪ ದಲ್ಲಿ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯ ಮೂವರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಬಂದಾರು ಗ್ರಾಮದ ಮೈರೋಳಡ್ಕದಲ್ಲಿರುವ ಏರ್‌ಟೆಲ್ ಮೊಬೈಲ್ ಟವರ್‌ನ ಜನರೇಟರ್‌ನಿಂದ ಕಳೆದ ಹಲವಾರು ದಿನಗಳಿಂದ ಡೀಸೆಲ್ ಕಳ್ಳತನವಾಗುತ್ತಿರುವ ಬಗ್ಗೆ ಸ್ಥಳೀಯರಿಗೆ ತೀವ್ರ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಆ.23ರಂದು ರಾತ್ರಿ ಕಾವಲು ಕಾಯುತ್ತಾ ಕುಳಿತಿದ್ದರು.
ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಮೂವರು ಡೀಸೆಲ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಒಗ್ಗೂಡಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಈ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಡೀಸೆಲ್ ಕಳವು ಆರೋಪದಡಿ ಬಂಧನವಾದ ಯುವಕರು ಬೆಳ್ಳಿಪ್ಪಾಡಿ ಗ್ರಾಮದ ಕೋಡಿಯಡ್ಕದ ಸೋಮಪ್ಪ ಗೌಡ ಅವರ ಪುತ್ರ ದೀಕ್ಷನ್, ಕಠಾರದ ಬಾಲಕೃಷ್ಣಶೆಟ್ಟಿಯವರ ಪುತ್ರ ವಿಖ್ಯಾತ್ ಮತ್ತು ಕೊಡಪೊಟ್ಯದ ನೋಣಯ್ಯ ಪೂಜಾರಿಯವರ ಪುತ್ರ ಚೇತನ್ ಎಂದು ಮಾಹಿತಿ ಲಭ್ಯವಾಗಿದೆ.





























