ಮಂಗಳೂರು: ಮೊಬೈಲ್ ಬಳಸುವ ವಿಚಾರವಾಗಿ ತಂಗಿಯೊಂದಿಗೆ ಜಗಳವಾಡಿ, ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ಒಟ್ಟು 5 ವರ್ಷ ಜೈಲು ಶಿಕ್ಷೆ ಹಾಗೂ ₹11,000 ದಂಡ ವಿಧಿಸಿದೆ.
ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ ಎಂಬಾತ 2019ರ ಅಕ್ಟೋಬರ್ 8ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಂಬಳಪದವು ಗ್ರಾಮದ ತನ್ನ ಮನೆಯಲ್ಲಿ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಅವರೊಂದಿಗೆ ಮೊಬೈಲ್ ನೀಡುವಂತೆ ಕೇಳಿಕೊಂಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಆರೋಪಿ ಸುತ್ತಿಗೆಯಿಂದ ಫಿಯೋನಾ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿದ್ದ ಎಂದು ಆರೋಪಿಸಲಾಗಿತ್ತು.
ಮಗಳು ಕಾಣೆಯಾಗಿರುವ ಬಗ್ಗೆ ಮೃತಳ ತಂದೆ ಪ್ರಾನ್ಸಿಸ್ ಕುಟಿನ್ಹಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಕಂಬಳಪದವು ಠಾಣೆಯಲ್ಲಿ ಮೊ.ನಂ. 67/2019ರಂತೆ ಐಪಿಸಿ ಕಲಂ 363ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಂತರ ಪ್ರಕರಣದ ತನಿಖೆಯನ್ನು ಎಸಿಪಿ ದಕ್ಷಿಣ ವಿಭಾಗದ ಟಿ. ಕೋದಂಡ ರಾಮ್ ಅವರು ನಡೆಸಿ, ಆರೋಪಿಯ ವಿರುದ್ಧ ಐಪಿಸಿ ಕಲಂ 302 ಮತ್ತು 201ರ ಅಡಿಯಲ್ಲಿ 2020ರ ಜನವರಿ 10ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್ 24, 2026ರಂದು ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾನನ್ನು ಐಪಿಸಿ ಕಲಂ 304(II)ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ. ಅಲ್ಲದೆ, ಐಪಿಸಿ ಕಲಂ 201ರ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ಹಾಗೂ ₹1,000 ದಂಡ ವಿಧಿಸಿದೆ.
ಅಭಿಯೋಜನಾ ಪರವಾಗಿ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ವಾದ ಮಂಡಿಸಿದ್ದರು.




























