ಬೆಂಗಳೂರು: ಮಂಗಳೂರು ಕೆಆರ್‌ಐಡಿಎಲ್ ವಿಭಾಗದ ಎಂಜಿನಿಯರ್‌ಗಳು ಉಸ್ತುವಾರಿ ಸಚಿವರು ಮತ್ತು ಇಲಾಖೆ ಸಚಿವರ ಹೆಸರಿನಲ್ಲಿ ಜನರಿಂದ ‘ಶುಲ್ಕ’ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಮಂಗಳೂರು ವಿಭಾಗದ ಕಾರ್ಯನಿರ್ವಹಣಾ ಎಂಜಿನಿಯರ್ ವಿಜಯ್, ಕಿರಿಯ ಎಂಜಿನಿಯರ್ ಪ್ರಜ್ವಲ್ ಎಂಬುವರು ನಿಗಮದ ವಿವಿಧ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಇಲಾಖೆ ಸಚಿವರಿಗೆ ಮಾಸಿಕ ಹಣ ಸಂದಾಯ ಮಾಡಬೇಕು ಎಂಬುದಾಗಿ ಹೇಳಿ, ‘ಕೆಆರ್‌ಐಡಿಎಲ್ ಶುಲ್ಕ’ದ ಹೆಸರಿನಲ್ಲಿ ಶೇ.7ರವರೆಗೆ ಹೆಚ್ಚುವರಿ ಹಣ ವಸೂಲು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆವೊಡ್ಡುತ್ತಿದ್ದಾರೆ ಎಂದು ಶಾಸಕರು ಸಿಎಂಗೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಸಾರ್ವಜನಿಕ ಹಣದಿಂದ ಕೈಗೊಳ್ಳಲಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ನಿಯಮಾನುಸಾರ ಕಾರ್ಯನಿರ್ಹಣೆ ಅತ್ಯಂತ ಅಗತ್ಯ. ಆದರೆ, ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸತ್ಯವಾಗಿದ್ದಲ್ಲಿ ಅದು ಸಾರ್ವಜನಿಕ ಹಣದ ದುರುಪಯೋಗಕ್ಕೆ ಕಾರಣವಾಗುವುದಲ್ಲದೆ ಇಲಾಖೆಯ ಘನತೆ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವುದು ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ.
ಕೂಡಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಕುಮಾರ್ ರೈ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ತನಿಖೆಯಲ್ಲಿ ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅನ್ವಯಿಸುವ ಸೇವಾ ನಿಯಮಗಳು ಮತ್ತು ಇಲಾಖಾ ನಿಯಮಾವಳಿಗಳನ್ವಯ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ ಸರ್ಕಾರದ ಹಣಕ್ಕೆ ನಷ್ಟ ಉಂಟಾಗಿರುವುದು ಅಥವಾ ಅಕ್ರಮವಾಗಿ ಹಣ ವಸೂಲು ಮಾಡಿರುವುದು ತನಿಖೆಯಿಂದ ದೃಢಪಟ್ಟಲ್ಲಿ ಆ ಮೊತ್ತವನ್ನು ವಸೂಲು ಮಾಡಲು ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.





























