ಪುತ್ತೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಚಾರ್ಜನ್ಯ ವಿರುವ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಖಂಡಿಗ ಮನೆಯ ಕರಿಯ ಅವರ ಪುತ್ರ ಶೇಖರ ಅಲಿಯಾಸ್ ಸೇಸಪ್ಪ ಎಂಬಾತನ ಮೇಲಿನ ಆರೋಪ ಸಾಬೀತಾಗಿದ್ದು ನ್ಯಾಯಾಲಯವು ಅಪರಾಧಿಗೆ 20 ವರ್ಷಗಳ ಕಾಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.
2020ರ ಅಕ್ಟೋಬರ್ 4ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯಾಗಿದ್ದು, ತನ್ನ ಸಂಬಂಧಿ ಎಂಬುದು ತಿಳಿದಿದ್ದರೂ ಆರೋಪಿ ಆಕೆಯ ಮನೆಯಲ್ಲೇ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿಯೂ ಇದೇ ಕೃತ್ಯ ಎಸಗಿದ್ದ.2021ರ ಫೆಬ್ರವರಿ 7ರಂದು ಬೆಳಿಗ್ಗೆ 11.30ರ ವೇಳೆಗೆ ಮತ್ತೆ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿ, ಈ ವಿಚಾರವನ್ನು ಮನೆಯವರಲ್ಲಿ ತಿಳಿಸದಂತೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಕೃತ್ಯದ ಕುರಿತು ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಅವರು ಸಾಕ್ಷ್ಯ ನುಡಿದಿದ್ದರು. ಅಭಿಯೋಗದ ಪರವಾಗಿ ಒಟ್ಟು 20 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲಾ ಚಕಲಬ್ಬಿ ಅವರು ಆರೋಪಿತನ ಮೇಲಿನ ಆಪಾದನೆ ಸಾಬೀತಾಗಿದೆ ಎಂದು ತೀರ್ಮಾನಿಸಿ ಅಪರಾಧಿಗೆ ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದರು.
ಪೋಕ್ಸೋ ಕಾಯ್ದೆಯ ಕಲಂ 5(ಎಲ್) ಜೊತೆಗೆ ಕಲಂ 6ರ ಅಡಿಯಲ್ಲಿನ ಅಪರಾಧಕ್ಕೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಹಾಗೂ ರೂ.25,000 ದಂಡ ವಿಧಿಸಲಾಗಿದೆ.
ದಂಡ ಪಾವತಿಸಲು ವಿಫಲವಾದಲ್ಲಿ ಒಂದು ವರ್ಷ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ಭಾರತೀಯ ದಂಡ ಸಂಹಿತೆಯ ಕಲಂ 506ರ ಅಡಿಯಲ್ಲಿ ಒಂದು ವರ್ಷ ಸರಳ ಕಾರಾಗೃಹ ಶಿಕ್ಷೆಹಾಗೂ ರೂ.25,000 ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದೆ.
ದಂಡ ಪ್ರಕ್ರಿಯಾ ಸಂಹಿತೆಯ ಕಲಂ 357ಎ ಹಾಗೂ ಪೋಕ್ಲಿ ಕಾಯ್ದೆಯ ಕಲಂ 33(8) ಮತ್ತು ನಿಯಮ 9ರ ಅಡಿಯಲ್ಲಿ ಸಂತ್ರಸ್ತೆಗೆ ರೂ.6 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಸರಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದ ಮಂಡಿಸಿದ್ದರು.


























