ಚಿಕ್ಕಮಗಳೂರು: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಟೈರ್ ದಿಢೀರನೆ ಕಳಚಿಬಿದ್ದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ತಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.
ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶೃಂಗೇರಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್, ಕೊಪ್ಪ ತಾಲೂಕಿನ ನಾಗಲಾಪುರ ಗ್ರಾಮದ ಸೇತುವೆ ಬಳಿ ತಲುಪುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ಬಸ್ ಚಲಿಸುತ್ತಿದ್ದಾಗ ದಿಢೀರನೆ ಟೈರ್ ಕಳಚಿಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಾಲಕ ಬಸ್ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದು, ಇದರಿಂದಾಗುತ್ತಿದ್ದ ಭಾರಿ ಅನಾಹುತ ತಪ್ಪಿದೆ.
ಬಸ್ನಿಂದ ಕಳಚಿಬಿದ್ದ ಟೈರ್ ನಡುರಸ್ತೆಯಲ್ಲಿ ಉರುಳಿ ಹೋಗಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಆ ವಾಹನಕ್ಕೆ ಹಾನಿಯಾಗಿದೆ. ಈ ಬಸ್ ಶಿವಮೊಗ್ಗ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ ಆಗಿದ್ದು. ಘಟನೆ ಸಂಭವಿಸಿದ ಬಳಿಕ ಕಳಚಿದ ಟೈರ್ನೊಂದಿಗೆ ಬಸ್ ರಸ್ತೆ ಮಧ್ಯದಲ್ಲೇ ನಿಂತಿದ್ದರಿಂದ ಪ್ರಯಾಣಿಕರು ನಡು ರಸ್ತೆಯಲ್ಲೇ ಕುಳಿತು ಪರದಾಡುವಂತಾಯಿತು.

























