ಬಂಟ್ವಾಳ: ಗೃಹಲಕ್ಷ್ಮಿ ಯೋಜನೆಯಡಿ ದೊರೆಯುವ ಮಾಸಿಕ ₹2,000 ಹಣವನ್ನು ಉಳಿತಾಯ ಮಾಡಿ, ಅದನ್ನೇ ಬಂಡವಾಳವನ್ನಾಗಿಸಿಕೊಂಡು ಸ್ವಂತ ಉದ್ಯಮ ಆರಂಭಿಸಿರುವ ಮಾಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಲಾ ಅವರ ಸಾಧನೆ ಮಹಿಳಾ ಸ್ವಾವಲಂಬನೆಗೆ ಮಾದರಿಯಾಗಿದೆ.
ಮಾವಿನಕಟ್ಟೆಯಲ್ಲಿ ಶಕುಂತಲಾ ಅವರು ಆರಂಭಿಸಿರುವ ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸಟೈಲ್ಸ್& ಗಾರ್ಮೆಂಟ್ಸ್ ಮಳಿಗೆಯ ಶುಭಾರಂಭದ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಅವರು ಭೇಟಿ ನೀಡಿ, ಶಕುಂತಲಾ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯಂತಿ ವಿ. ಪೂಜಾರಿ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿವೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉಳಿತಾಯ ಮಾಡಿ, ಸ್ವಂತ ಉದ್ಯಮಕ್ಕೆ ಬಂಡವಾಳವನ್ನಾಗಿ ಪರಿವರ್ತಿಸಿರುವ ಶಕುಂತಲಾ ಅವರ ಪ್ರಯತ್ನ ಶ್ಲಾಘನೀಯ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಅವರ ಸಾಧನೆ ಉತ್ತಮ ಉದಾಹರಣೆಯಾಗಿದೆ ಎಂದರು.
ಮಹಿಳೆಯರು ತಮ್ಮ ಕೌಶಲ್ಯ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಸ್ವಂತ ಉದ್ಯಮ ಆರಂಭಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ನಾರಾಯಣ ನಾಯ್ಕ ಉಪಸ್ಥಿತರಿದ್ದರು.


























