ಬೆಳ್ತಂಗಡಿ: ಕೊಕ್ಕಡ ಹಾಗೂ ಸೌತಡ್ಕ ದೇವಸ್ಥಾನದ ಬಳಿಯ ಅಂಗಡಿಗಳಿಗೆ ಸಂಬಂಧಿಸಿದಂತೆ ನಡೆದ ಗಲಾಟೆ, ಹಲ್ಲೆ ಮತ್ತು ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣ: ಅ.18ರಂದು ಬೆಳಿಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರು ವ್ಯಾಪಾರ ನಡೆಸುತ್ತಿದ್ದ ವೇಳೆ, ಈ ಹಿಂದೆ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಹರೀಶ್, ಅವರ ಪತ್ನಿ, ಮಕ್ಕಳು ಹಾಗೂ ಇತರರು ಅಂಗಡಿಯೊಳಗೆ ಏಕಾಏಕಿ ಪ್ರವೇಶಿಸಿ ಸುಮಾರು 25 ಸಾವಿರ ರೂ. ಮೌಲ್ಯದ ಕಟ್ಟಡ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ, ರಾಘವ ಭಂಡಾರಿ ಮತ್ತು ಅವರ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 78/2026ರಂತೆ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣ: ಸೌತಡ್ಕ ದೇವಸ್ಥಾನದ ಬಳಿಯ ಅಂಗಡಿಯಲ್ಲಿ ಹರಿಶ್ಚಂದ್ರ ಅವರು ವ್ಯಾಪಾರ ನಡೆಸುತ್ತಿದ್ದ ವೇಳೆ, ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಮತ್ತು ಚೇತನ್ ಎಂಬವರು ಅಂಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸೊತ್ತುಗಳನ್ನು ಹೊರಗೆ ಎಸೆದು, ಹರಿಶ್ಚಂದ್ರ, ಅವರ ಪತ್ನಿ ಹಾಗೂ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಹರಿಶ್ಚಂದ್ರ ಅವರ ಪತ್ನಿ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 79/2026ರಂತೆ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.


























