ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್ನಲ್ಲಿ ಯುವಕನೊಬ್ಬನ ಮೇಲೆ ಆರು ಮಂದಿ ಸೇರಿ ಹಲ್ಲೆ ನಡೆಸಿ, ಚೂರಿಯಿಂದ ಹಲವು ಬಾರಿ ಇರಿದ ಘಟನೆ ಅ. 18ರ ರಾತ್ರಿ ನಡೆದಿದೆ.
ಬಂಟ್ವಾಳದ ಸಂಗಬೆಟ್ಟು ನಿವಾಸಿ ಗಣೇಶ್ (34) ಎಂಬವರ ಸಹೋದರ ಪ್ರಕಾಶ್ ಹಲ್ಲೆಗೊಳಗಾದವರು.
ಗಣೇಶ್ ಅವರು ತಮ್ಮ ಸಹೋದರ ಪ್ರಕಾಶ್ ಹಾಗೂ ಇತರ ಐವರು ಸ್ನೇಹಿತರೊಂದಿಗೆ ಸಿದ್ದಕಟ್ಟೆ ಜಂಕ್ಷನ್ನಲ್ಲಿ ನಿಂತಿದ್ದ ವೇಳೆ, ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದ ಆರೋಪಿಗಳಾದ ಅಕ್ಷಿತ್, ಕಿರಣ್ ಅಲಿಯಾಸ್ ರಂಜು, ಅಜೀತ್, ಧನುಷ್, ಸಂತೋಷ್ ಮತ್ತು ರಾಜು ಎಂಬವರು ಸ್ವಲ್ಪ ಮುಂದೆ ವಾಹನಗಳನ್ನು ನಿಲ್ಲಿಸಿ ಪ್ರಕಾಶ್ ಅವರನ್ನು ಕರೆದಿದ್ದಾರೆ ಎನ್ನಲಾಗಿದೆ.
ಆರೋಪಿಗಳಿದ್ದ ಸ್ಥಳಕ್ಕೆ ಪ್ರಕಾಶ್ ತೆರಳಿದಾಗ, ಆರು ಮಂದಿ ಸೇರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಅಕ್ಷಿತ್ ಎಂಬಾತ ಚೂರಿಯಿಂದ ಪ್ರಕಾಶ್ ಅವರಿಗೆ ಹಲವು ಬಾರಿ ಇರಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಪ್ರಕಾಶ್ ಅವರನ್ನು ಗಣೇಶ್ ಹಾಗೂ ಇತರರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























