ವಿಜಯಪುರ: ಪೇಂಟಿಂಗ್ ಕೆಲಸಕ್ಕೆ ಬಂದ ಯುವಕನೊಂದಿಗೆ ಪ್ರೀತಿ ಬೆಳೆಸಿಕೊಂಡ ಮಹಿಳೆಯೊಬ್ಬಳು, ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಶೇಖರ್ ಮತ್ತು ಅಶ್ವಿನಿ ದಂಪತಿಗೆ ಆರು ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ರಾಜಶೇಖರ್ ಹೊಸದಾಗಿ ಕಟ್ಟಿಸಿದ್ದ ಮನೆಗೆ ಪೇಂಟಿಂಗ್ ಮಾಡಲು ಬಂದಿದ್ದ ಆನಂದ್ ಕಲ್ಲೂರನೊಂದಿಗೆ ಅಶ್ವಿನಿಗೆ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಬಳಿಕ ಪತಿಯನ್ನು ಕೊಲೆ ಮಾಡಿ ಒಟ್ಟಿಗೆ ಜೀವನ ನಡೆಸಲು ಇಬ್ಬರೂ ಸಂಚು ರೂಪಿಸಿದ್ದರು ಎನ್ನಲಾಗಿದೆ.
ರಾಜಶೇಖರ್ ವಾಕಿಂಗ್‌ಗೆ ತೆರಳಿದ್ದ ವೇಳೆ ಮಾಹಿತಿ ಪಡೆದ ಆನಂದ್, ತನ್ನ ಸಹಚರರಾದ ಸಚಿನ್ ಬಡಳ್ಳಿ ಹಾಗೂ ಅಪ್ರಾಪ್ತ ಬಾಲಕನೊಂದಿಗೆ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋದಲ್ಲಿ ಬಂದು, ಜುಮನಾಳ ರಸ್ತೆಯಲ್ಲಿ ರಾಜಶೇಖರ್‌ಗೆ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರಂಭದಲ್ಲಿ ಅಪಘಾತವೆಂದು ಭಾವಿಸಲಾಗಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಅನುಮಾನ ಮೂಡಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಕೊಲೆಯ ಸಂಚು ಬಯಲಾಗಿದೆ. ಪತ್ನಿ ಅಶ್ವಿನಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.


























