ಪುತ್ತೂರು: ಉಪ್ಪಿನಂಗಡಿ ಸಮೀಪದ ಇಳಂತಿಲ ಬಳಿ ಸ್ನಾನ ಮಾಡಲು ನೇತ್ರಾವತಿ ನದಿಗಿಳಿದಿದ್ದ ಇಬ್ಬರು ನೀರುಪಾಲಾದ ಘಟನೆ ಸೋಮವಾರ( ಜು 5) ಸಂಜೆ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಬ್ಬನ ಹಳ್ಳಿ ನಿವಾಸಿ ಧರ್ಮ ಮತ್ತು ಮೀನಾಕ್ಷಿ ದಂಪತಿಗಳ ಮಕ್ಕಳಾದ ನಿಂಗರಾಜು (15) ಮತ್ತು ಸತೀಶ್ (13) ಮೃತಪಟ್ಟವರು.
ನಿಂಗರಾಜು ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ. ಸತೀಶ್ ಪುತ್ತೂರಿನ ಬಲ್ನಾಡಿನಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ.
ಇವರ ಪೋಷಕರು ಉಪ್ಪಿನಂಗಡಿಯ ಇಳಂತಿಲದ ಕೇದಾರ ಮನೆಯವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಲಾಕ್ ಡೌನ್ ರಜೆಯ ಹಿನ್ನಲೆ ವಸತಿ ಶಾಲೆಯಿಂದ ಪೋಷಕರ ಜತೆ ಇರಲು ಇಳಂತಿಲಕ್ಕೆ ಬಂದಿದ್ದರು.
ಪೋಷಕರು ಉಪ್ಪಿನಂಗಡಿ ಪೇಟೆಗೆ ಹೋಗಿದ್ದ ಸಂದರ್ಭ ಈ ಇಬ್ಬರು ಬಾಲಕರು ಮತ್ತು ಮತ್ತೊಬ್ಬ ಸಹೋದರ ಬಸವ ನೇತ್ರಾವತಿ ನದಿ ಬಳಿ ತೆರಳಿದ್ದಾರೆ.
ಅಲ್ಲಿ ನದಿಗಿಳಿದ ನಿಂಗರಾಜ್ ಮತ್ತು ಸತೀಶ್ ನೀರು ಪಾಲಾಗಿದ್ದು, ಮತ್ತೊಬ್ಬ ಸಹೋದರ ಬಸವ ಇದನ್ನು ನೋಡಿ ಓಡಿ ಬಂದು ಮನೆಯಲ್ಲಿ ತಿಳಿಸಿದ್ದಾನೆ.
ಕೂಡಲೇ ಸ್ಥಳೀಯರು ಬಾಲಕರಿಬ್ಬರನ್ನು ರಕ್ಷಿಸಲು ಘಟನೆ ನಡೆದ ಸ್ಥಳಕ್ಕೆ ಬಂದರಾದರೂ ಅಷ್ಟರಲ್ಲಾಗಲೇ ಮಕ್ಕಳಿಬ್ಬರೂ ನೀರಿನಲ್ಲಿ ಮುಳುಗಿ ಹೋಗಿದ್ದರು.
ಬಳಿಕ ಈ ಬಾರಿಯ ಮಳೆಗಾಳದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭ ನೆರವಾಗಲು ಹತ್ತು ಜನರ ನುರಿತ ಈಜುಗಾರರ ತಂಡವನ್ನು ರಚಿಸಿಕೊಂಡಿರುವ ಉಪ್ಪಿನಂಗಡಿಯ ಎಸ್ ಕೆ ಎಸ್ ಎಸ್ ಎಫ್ ಮತ್ತು ವಿಖಾಯ ತಂಡದ ಈ ಈಜುಗಾರರು ನೀರಿಗಿಳಿದು, ಸುಮಾರು ಮುಕ್ಕಾಲು ಗಂಟೆ ಶೋಧ ಕಾರ್ಯ ನಡೆಸಿ ಮೃತ ದೇಹಗಳನ್ನು ಮೇಲಕ್ಕೆ ಎತ್ತಿದ್ದರು.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಎಸ್ ಐ ಕುಮಾರ್ ಕಾಂಬ್ಲೆ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತನ್ನ ಮಕ್ಕಳಿಗೆ ಉನ್ನತ ಭವಿಷ್ಯ ನೀಡಬೇಕು, ಅವರನ್ನು ಸಮಾಜದ ಸಾಧಕರ ಸಾಲಿನಲ್ಲಿ ಸೇರಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ ಧರ್ಮ ಮತ್ತು ಮೀನಾಕ್ಷಿ ದಂಪತಿಗಳು ದೂರದ ಗದಗದಿಂದ ಬಂದು ಇಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಅದರೇ ತಮ್ಮ ಕನಸಿನ ಇಬ್ಬರು ಕುಡಿಗಳು ಒಂದೇ ದಿನ ಕಮರಿ ಹೋಗಿರುವುದು ನೋಡಿ ಅವರ ಎದೆಯೊಡೆದು ಹೋಗಿದೆ. ಮೃತ ಇಬ್ಬರು ಬಾಲಕರು ಪ್ರತಿಭಾನ್ವಿತರಾಗಿದ್ದೂ ಓದಿನಲ್ಲಿ ಚುರುಕಾಗಿದ್ದರು ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.