ಪುತ್ತೂರು:ಬನ್ನೂರು ಜೈನರಗುರಿ ಸಮೀಪ ಭಿನ್ನ ಕೋಮಿನ ಯುವಕರ ಮಧ್ಯೆ ಗಲಾಟೆ ನಡೆದ ಘಟನೆಗೆ ಸಂಬಂಧಿಸಿ ಇತ್ತಂಡದ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆಯೊಡ್ಡಿ ಹಲ್ಲೆ: ಬನ್ನೂರು ಮಾರ್ನಡ್ಕ ನಿವಾಸಿ ಫಯಾಜ್ ಅವರು ನೀಡಿದ ದೂರಿನಲ್ಲಿ ನಾನು ಬೆಂಗಳೂರಿನಲ್ಲಿ ಸೇಲ್ಸ್‌ಮೆನ್ ಆಗಿದ್ದು ನಾಲ್ಕು ತಿಂಗಳಿನಿಂದ ಊರಿಗೆ ಬಂದು ಕೆಲಸ ಮಾಡುತ್ತಿದ್ದೇನೆ. ಜು.೬ರಂದು ನಾನು ನನ್ನ ಸ್ನೇಹಿತ ಮೊಹಮ್ಮದ್ ರಿಯಾಜ್ ಜೊತೆ ಜೈನರಗುರಿಯ ಅಂಗಡಿಯೊಂದಕ್ಕೆ ಸಾಮಾನು ತರಲು ಹೋಗಿದ್ದ ವೇಳೆ ಶರತ್ ಮತ್ತು ಅಭಿಜಿತ್ ಎಂಬವರು ನಮ್ಮನ್ನು ತಡೆದು, ಈ ಬ್ಯಾರಿಯ ಅತ್ ಹಿಂದುವ ಎಂದು ಪ್ರಶ್ನಿಸಿ ನನ್ನನ್ನು ದೂಡಿ ಹಾಕಿದ್ದಾರೆ. ಇದೇ ವೇಳೆ ಶರತ್ ಎಂಬವರು ಅವರ ಮನೆಗೆ ಹೋಗಿ ತಲವಾರು ತಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮನೆ ಬಳಿ ಸಿಗರೇಟ್ ಸೇದುವುದನ್ನು ವಿಚಾರಿಸಿದಕ್ಕೆ ಹಲ್ಲೆ: ಬನ್ನೂರು ಜೈನರಗುರಿ ನಿವಾಸಿ ಶರತ್ ಮತ್ತು ಅಭಿಜಿತ್ ಅವರೂ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಹಲವು ಸಮಯಗಳಿಂದ ಅಂಗಡಿ ಬಳಿಯಲ್ಲಿ ಯುವಕರು ಗುಂಪು ಸೇರುತ್ತಿದ್ದರು. ಜು.೬ರಂದು ರಾತ್ರಿ ಜೈನರಗುರಿ ಅಂಗಡಿಯ ಬಳಿಯಿಂದ ನನ್ನ ಮನೆಗೆ ತೆರಳುವ ದಾರಿಯಲ್ಲಿ ನಾನು ಗೆಳೆಯ ಅಭಿಜಿತ್‌ರವರೊಂದಿಗೆ ಮನೆಗೆ ತೆರಳುವ ಸಂದರ್ಭದಲ್ಲಿ ಜೈನರಗುರಿ ನಿವಾಸಿ ಫಯಾಜ್ ಹಾಗೂ ರಿಯಾಝ್ ಎಂಬವರು ಸಿಗರೇಟ್ ಸೇದುತ್ತಿದ್ದರು. ಮನೆ ಬಳಿ ಸಿಗರೇಟು ಸೇದಬಾರದು ಎಂದು ಅವರಿಗೆ ತಿಳಿಸಿದೆವು. ಈ ಸಂದರ್ಭದಲ್ಲಿ ಅವರು ನಮ್ಮನ್ನು ವಿಚಾರಿಸಲು ನೀವು ಯಾರು ಎಂದು ಪ್ರಶ್ನಿಸಿದ್ದು ನಮ್ಮೊಳಗೆ ಮಾತಿನ ಚಕಮಕಿ ನಡೆದು ಅವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ ಸುಮಾರು ೧೫ ಜನರೊಂದಿಗೆ ನಮ್ಮ ಮನೆ ಬಳಿ ಬಂದು ಅವರು ಗಲಾಟೆ ನಡೆಸಿದ್ದಾರೆ.ನಂತರದ ಬೆಳವಣಿಗೆಯಲ್ಲಿ ಸುಮಾರು 70 ಜನರ ತಂಡ ನಮ್ಮ ಮನೆ ಬಳಿ ಬಂದು ಗಲಾಟೆ ನಡೆಸಿದ್ದಾರೆ ಹೊರತು ನಾವು ಯಾವುದೇ ರೀತಿಯ ತಲವಾರ್ ದಾಳಿ ನಡೆಸಿಲ್ಲ ಎಂದು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶರತ್ ಹಾಗೂ ಅಭಿಜಿತ್ ಸ್ಪಷ್ಟಪಡಿಸಿದ್ದಾರೆ. ಘಟನೆ ನಡೆದ ದಿನ ರಾತ್ರಿಯೇ ಫಯಾಝ್ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿ ನಗರ ಪೊಲೀಸ್ ಠಾಣೆಯಲ್ಲಿ ಇತ್ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.