ವಿಟ್ಲ : ಮಾಜಿ ಸಚಿವ ರಮಾನಾಥ ರೈ ವಿರುದ್ಧ ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಮಾನಹಾನಿ ಮಾಡಿದ ಆರೋಪದಲ್ಲಿ ಸಾಲೆತ್ತೂರು ನಿವಾಸಿ ಕೊಳ್ನಾಡು ಪಂ.ಸದಸ್ಯ ಅಗರಿ ಪ್ರಶಾಂತ್ ಶೆಟ್ಟಿ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಜಿಲ್ಲೆಯಲ್ಲಿ ನಡೆದ 23 ಹಿಂದೂ ಯುವಕರ ಕೊಲೆಯಲ್ಲಿ, ಕಲ್ಲಡ್ಕ ಶ್ರೀ ರಾಮ ಶಾಲೆಯ ಅಕ್ಕಿ ತಡೆಯುವ ಕಾರ್ಯ ಸೇರಿದಂತೆ ಹಲವಾರು ಹಿಂದೂ ವಿರೋಧಿ ಕೆಲಸಗಳಲ್ಲಿ ರೈ ಯವರು ಪರೋಕ್ಷವಾಗಿ ಕಾರಣವಾಗಿದ್ದಾರೆಂದು ಸಾಮಾಜಿಕ ತಾಣದಲ್ಲಿ ಪ್ರಶಾಂತ್ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸುಳ್ಳು ಸುದ್ದಿ ಹರಿಯಬಿಟ್ಟು ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಿ ಅಶಾಂತಿ ಹುಟ್ಟುಹಾಕಲು ಪ್ರಶಾಂತ್ ಸಂಚು ರೂಪಿಸಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದ್ದು, ಪ್ರಶಾಂತ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.