ಉಡುಪಿ : ಸುದೀರ್ಘ ಕಾಲ ಮಂದಾರ್ತಿ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ(95) ಕುಂದಾಪುರದ ಮತ್ಯಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕರಾವಳಿಯ ಪ್ರಸಿದ್ಧ ಮಂದಾರ್ತಿ ಮೇಳ ಸೇರಿದಂತೆ ಪೆರ್ಡೂರು, ಕೊಡವೂರು, ಅಮೃತೇಶ್ವರಿ, ಮಾರಣಕಟ್ಟೆ ಹಾಗೂ ಕಳುವಾಡಿ ಮೇಳಗಳಲ್ಲಿ 45 ಕ್ಕೂ ಅಧಿಕ ವರ್ಷಗಳ ಕಾಲ ಭಾಗವತರಾಗಿ ಕಲಾಸೇವೆ ಸಲ್ಲಿಸಿರುವ ಹಿರಿಮೆ ಇವರದ್ದು. 40ಕ್ಕೂ ಹೆಚ್ಚು ಪೌರಾಣಿಕ ಪ್ರಸಂಗಗಳು ಇವರಿಗೆ ಕಂಠಸ್ಥವಾಗಿದ್ದವು. ಯಕ್ಷಗಾನ ಕ್ಷೇತ್ರದಲ್ಲಿ ಇವರ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಇವರು ಬಾಜನರಾಗಿದ್ದರು. ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಥಮ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗ ಇವರಿಗೆ ನೀಡಿ ಗೌರವಿಸಿತ್ತು.