ಪುತ್ತೂರು: ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಜುಲೈ12ರಂದು ಕೋಡಿಂಬಾಡಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆ ಮುಂದೂಡಿಕೆಯಾಗಿದೆ. ಪ್ರತಿಭಟನೆಗೆ ಅನುಮತಿ ನೀಡುವಂತೆ ಮನವಿ ನೀಡಲು ಪುತ್ತೂರು ನಗರ ಠಾಣೆಗೆ ಹೋಗಿದ್ದ ಹೋರಾಟ ಸಮಿತಿಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲ ನಾಯ್ಕರವರು ಮೊಬೈಲ್ ನೆಟ್ವರ್ಕ್ ಗೆ ಸಂಬಂಧಿಸಿದವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು ಪೂರಕ ಸ್ಪಂದನ ದೊರಕಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ಪ್ರಯತ್ನ: ಪ್ರತಿಭಟನೆ ಮುಂದೂಡಿಕೆ
ಕೋಡಿಂಬಾಡಿ, ದಾರಂದಕುಕ್ಕು , ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ, ಶಾಂತಿನಗರ, ಮಠಂತಬೆಟ್ಟು ಮುಂತಾದ ಪರಿಸರದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳಲು ಅಸ್ತಿತ್ವಕ್ಕೆ ತರಲಾಗಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಜುಲೈ 12ರಂದು ಕೋಡಿಂಬಾಡಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು.
ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ ನೆಟ್ ಗಳನ್ನು ನಂಬಿ ಬದುಕುವ ಪರಿಸ್ಥಿತಿ ಇದೆ, ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಡೆಯುತ್ತಿದೆ, ಕೆಲವರಿಗೆ ವರ್ಕ್ ಫ್ರಮ್ ಹೋಮ್ ನಡೆಯುತ್ತಿದೆ, ಅಲ್ಲದೆ, ದೈನಂದಿನ ಚಟುವಟಿಕೆಗಳಿಗೆ ಮೊಬೈಲ್ ಫೋನ್ ತೀರಾ ಅಗತ್ಯವಾಗಿದೆ. ಆದರೂ, ಈ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಹಲವಾರು ಸಮಯಗಳಿಂದ ಇದೆ. ಈ ಬಗ್ಗೆ ಮನವಿ ಸಲ್ಲಿಸಿ ಹೋರಾಟದ ಎಚ್ಚರಿಕೆ ನೀಡಿದರೂ ಸಂಬಂಧಿಸಿದವರು ಸ್ಪಂದಿಸಿಲ್ಲ ಎಂಬ ಕಾರಣಕ್ಕಾಗಿ ಪಕ್ಷ ಭೇದವಿಲ್ಲದೆ ಕೋಡಿಂಬಾಡಿಯ ಬದಿನಾರಿನಲ್ಲಿರುವ ಏರ್ಟೆಲ್ ಟವರ್ ಬಳಿ ಜುಲೈ 12ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು.
ಈ ಪ್ರತಿಭಟನೆಗೆ ಅನುಮತಿ ಪಡೆಯಲೆಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ ಜಯಪ್ರಕಾಶ್ ಬದಿನಾರು, ಅಧ್ಯಕ್ಷ ವಿಕ್ರಮ್ ಶೆಟ್ಟಿ ಅಂತರ, ಪ್ರಧಾನ ಕಾರ್ಯದರ್ಶಿ ಎ.ಗುಣಕರ ಏಕ, ಜೊತೆ ಕಾರ್ಯದರ್ಶಿ ಯೋಗೀಶ್ ಯಸ್.ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಉಪಾಧ್ಯಕ್ಷರಾದ ಪ್ರಭಾಕರ ಸಾಮಾನಿ ಮಠಂತಬೆಟ್ಟು ಮತ್ತು ವಿಜಯ ಕುಮಾರ್ ಚೀಮುಳ್ಳುರವರು ಜುಲೈ 10ರಂದು ನಗರ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ವೃತ್ತ ನಿರೀಕ್ಷಕ ಗೋಪಾಲ ನಾಯ್ಕರವರು ಏರ್ಟೇಲ್ ಏರಿಯಾ ರೀಜನಲ್ ಮೆನೇಜರ್ ಶರತ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಪ್ರತಿಭಟನೆಗೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಿದರು. ಈ ವೇಳೆ ಶರತ್ ಅವರು ಏರ್ಟೆಲ್ ಗೆ ಸಂಬಂಧಿಸಿದ ಸಮಸ್ಯೆಯನ್ನು ಜುಲೈ 13ರ ಸಂಜೆಯೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡುವಂತೆ ಗೋಪಾಲ ನಾಯ್ಕರವರು ಹೋರಾಟ ಸಮಿತಿಯವರಲ್ಲಿ ಕೇಳಿಕೊಂಡರು. ಸಮಸ್ಯೆ ಪರಿಹರಿಸುವ ಭರವಸೆ ದೊರೆತಿರುವುದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗುವುದು, ಬೇಡಿಕೆ ಈಡೇರದೇ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ ಹೋರಾಟ ಸಮಿತಿಯವರು ಜನರ ಸಮಸ್ಯೆಯನ್ನು ಅರ್ಥೈಸಿಕೊಂಡು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ ಕರ್ತವ್ಯ ಪ್ರಜ್ಞೆ ಮೆರೆದ ವೃತ್ತ ನಿರೀಕ್ಷಕ ಗೋಪಾಲ ನಾಯ್ಕರವರಿಗೆ ಕೃತಜ್ಞತೆ ಸಲ್ಲಿಸಿದರು.