ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ದಿ. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿ ಮೇಲ್ಮನವಿ ಮತ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಜು.5 ರಂದು ರಾಜೇಶ್ವರಿ ಶೆಟ್ಟಿ ಹಾಗೂ ಜು.7 ರಂದು ನವನೀತ್ ಶೆಟ್ಟಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಮೂರು ವಾರಗಳ ಬಳಿಕ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಐದು ವರ್ಷಗಳ ಹಿಂದೆ ನಡೆದಿದ್ದ ಉಡುಪಿಯ ಇಂದ್ರಾಳಿಯ ಎನ್‌ಆರ್‌ಐ ಉದ್ಯಮಿ ಭಾಸ್ಕರ್ ಶೆಟ್ಟಿ (52) ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ಮೃತರ ಪತ್ನಿ ರಾಜೇಶ್ವರಿ ಮತ್ತು ಮಗ ನವನೀತ್ ಶೆಟ್ಟಿ ಹಾಗೂ ಜೋತಿಷಿ ನಿರಂಜನ್ ಭಟ್ ಸೇರಿದಂತೆ ಮೂವರಿಗೆ ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೂನ್ 8ರಂದು ಮೂವರಿಗೂ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದೇ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪ ಹೊತ್ತಿದ್ದ ರಾಘವೇಂದ್ರ ಭಟ್ ಅವರನ್ನು ನ್ಯಾಯಾಲಯ ಖುಲಾಸೆ ಮಾಡಿದೆ.