ಸುಬ್ರಹ್ಮಣ್ಯ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬುಧವಾರ ಮುಳುಗಡೆಯಾಗಿದೆ.
ಸುಬ್ರಹ್ಮಣ್ಯ ಅಲ್ಲದೇ, ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಮಂಗಳವಾರ ಸಂಜೆಯೇ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿತ್ತು. ರಾತ್ರಿ ಇಡೀ ಸುರಿದ ಮಳೆಯಿಂದಾಗಿ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕುಮಾರಧಾರ ಸೇತುವೆಯ ಕೆಳ ಭಾಗದ ಕಿಂಡಿ ಅಣೆಕಟ್ಟು ಹಾಗೂ ಸ್ನಾನಘಟ್ಟ ನೀರಿನಿಂದ ಜಲಾವೃತವಾಗಿದೆ. ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ನದಿಯ ದಡದಲ್ಲಿ ತೀರ್ಥಸ್ನಾನ ನೆರವೇರಿಸುತ್ತಿದ್ದು, ಭಕ್ತಾದಿಗಳಿಗೆ ನದಿ ದಡದಲ್ಲೇ ತೀರ್ಥಸ್ನಾನ ನೆರವೇರಿಸಲು ಅವಕಾಶ ನೀಡಲಾಗಿದೆ.
ಇನ್ನು ಆದಿ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಸುಬ್ರಹ್ಮಣ್ಯ ಠಾಣಾ ಪೊಲೀಸರು ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿಗಳು ನದಿಯ ದಡದಲ್ಲಿ ಕಾವಲು ವ್ಯವಸ್ಥೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.