ಕೆಲ ದಿನಗಳ ಹಿಂದಷ್ಟೇ 49ನೇ ವಸಂತಕ್ಕೆ ಕಾಲಿಟ್ಟ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಅಭಿಮಾನಿಗಳಿಗೆ ಗಿಫ್ಟ್ ನೀಡೋಕೆ ಸಿದ್ಧರಾಗಿದ್ದಾರೆ. ಬಯೋಪಿಕ್ನೊಂದಿಗೆ ಅಭಿಮಾನಿಗಳ ಮುಂದೆ ಬರಲು ದಾದಾ ನಿರ್ಧರಿಸಿದ್ದಾರಂತೆ. ಹಾಗಾದ್ರೆ ಗಂಗೂಲಿ ಪಾತ್ರ ಮಾಡೋದ್ಯಾರು..? ಸಿದ್ಧತೆ ಹೇಗೆ ನಡೀತಾ ಇದೆ.? ಇಲ್ಲಿದೆ ನೋಡಿ ಇನ್ಸೈಡ್ ಡಿಟೇಲ್ಸ್.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕೂಲ್ ಕ್ಯಾಪ್ಟನ್ ಎಮ್ಎಸ್ ಧೋನಿ, ಮೊಹಮದ್ ಅಜರುದ್ದೀನ್ ಈ ಮೂವರು ದಿಗ್ಗಜರ ಬಯೋಪಿಕ್ಗಳು ಈಗಾಗಲೇ ತೆರೆಗೆ ಅಪ್ಪಳಿಸಿವೆ. ಇದೀಗ ಮತ್ತೋರ್ವ ಮಾಜಿ ನಾಯಕ, ಅಭಿಮಾನಿಗಳ ನೆಚ್ಚಿನ ಸೌರವ್ ಗಂಗೂಲಿಯ ಬಯೋಪಿಕ್, ತೆರೆಗೆ ಬರಲಿದೆ ಅನ್ನೋ ಸುದ್ದಿ ಹೊರಬಿದ್ದಿದೆ. ಇದಕ್ಕೆ ಗಂಗೂಲಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದು, ರಣಬೀರ್ ಕಪೂರ್ ದಾದಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಅನ್ನೋದು ಮೂಲಗಳ ಮಾಹಿತಿಯಾಗಿದೆ.
ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಗಂಗೂಲಿಗೆ ಅಗ್ರಸ್ಥಾನ. ನಾಯಕನಾಗಿ, ಆಟಗಾರನಾಗಿ ಬೆಂಗಾಲ್ ಟೈಗರ್ ನೀಡಿದ ಸಾಧನೆಯನ್ನ ಅಲ್ಲಗಳೆಯುವಂತಿಲ್ಲ. ಮ್ಯಾಚ್ ಫಿಕ್ಸಿಂಗ್ ಭೂತ ಭಾರತೀಯ ಕ್ರಿಕೆಟ್ಗೆ ಮಂಕು ಬಡಿಸಿದ್ದ ಕಾಲದಲ್ಲಿ ನಾಯಕನ ಹೊಣೆ ಹೊತ್ತ ದಾದಾ, ತಂಡವನ್ನ ಯಶಸ್ಸಿನೆಡೆಗೆ ಮುನ್ನಡೆಸಿದ್ದು ಎಂದಿಗೂ ವಿಶಿಷ್ಠ ಸಾಧನೆಯೇ ಸರಿ. ವಿದೇಶಗಳಲ್ಲಿ ತಂಡವನ್ನ ಗೆಲ್ಲಿಸಿದ್ದು, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ನಾಟ್ವೆಸ್ಟ್ ಸರಣಿ ಜಯಿಸಿದ್ದು, 2002ರ ಚಾಂಪಿಯನ್ಸ್ ಟ್ರೋಫಿಯ ಗೆಲುವು, ದಾದಾ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ಓರ್ವ ಬ್ಯಾಟ್ಸ್ಮನ್ ಆಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ಗಳನ್ನ ಸಿಡಿಸಿದ ಸಾಧನೆಯನ್ನೂ ಗಂಗೂಲಿ ಮಾಡಿದ್ದಾರೆ. ಇಷ್ಟೇ ಅಲ್ಲ.. ಬಂಗಾಳ ಕ್ರಿಕೆಟ್ ಅಸೋಷಿಯೇಶನ್ನ ಅಧ್ಯಕ್ಷರಾಗಿ, ಸದ್ಯ ಬಿಸಿಸಿಐನ ಅಧ್ಯಕ್ಷರಾಗಿ ಉತ್ತಮ ಆಡಳಿತಗಾರ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.
ಇಷ್ಟೇ ಸಾಧನೆಗಳೊಂದಿಗೆ ರಾಜ ಮನೆತನದಿಂದ ಬಂದ ಗಂಗೂಲಿ, ಕಾಂಟ್ರವರ್ಸಿಗಳಿಂದಲೂ ಸದ್ದು ಮಾಡಿದ್ದಾರೆ. ಗ್ರೇಗ್ ಚಾಪೆಲ್ ಜೊತೆಗಿನ ರಿಫ್ಟ್, ಆಟಗಾರರಿಗೆ ಡ್ರಿಂಕ್ಸ್ ತೆಗೆದುಕೊಂಡು ಹೋಗಲು ನಿರಾಕರಿಸಿದ್ದು, ಕಮ್ಬ್ಯಾಕ್ಗಾಗಿ ಮಾಡಿದ ಸರ್ಕಸ್.. ಹೀಗೆ ಹಲವು ವಿಚಾರಗಳಲ್ಲಿ ಗಂಗೂಲಿ ಹೆಡ್ ಲೈನ್ ಸ್ಟೋರಿ ಕೂಡ ಆಗಿದ್ದಾರೆ. ಹೀಗಾಗಿ ಗಂಗೂಲಿ ಬಯೋಪಿಕ್ ಯಾವೆಲ್ಲಾ ಅಂಶಗಳನ್ನ ಹೊಂದಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.