ಜಯನಗರದ ಕೊರಂಬಡ್ಕ ದೈವಸ್ಥಾನದ ವಠಾರದಲ್ಲಿ ಕ್ರಿಕೆಟ್ ಆಡುವ ವಿಚಾರವಾಗಿ ವಿವಾದವೆದ್ದು ಸ್ಥಳದಲ್ಲಿ ಗಿಡ ನೆಡಲು ಗುಂಡಿ ತೆಗೆದುದರಿಂದ ಕ್ರಿಕೆಟ್ ಆಡುವ ಯುವಕರಿಗೂ ದೈವಸ್ಥಾನ ಆಡಳಿತ ಸಮಿತಿಯವರಿಗೂ ಮಾತಿನ ಚಕಮಕಿಯಾದಾಗ ದೈವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಎಂಬವರು ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮೀಯರ ಭಾವನೆಗೆ ಧಕ್ಕೆ ಯಾಗುವಂತೆ ಮಾತನಾಡಿದ್ದಾರೆಂಬ ವೀಡಿಯೋ ವೈರಲ್ ಆಗಿ ಪೋಲೀಸ್ ಠಾಣೆಗೆ ಮನವಿ ಬಂದ ಹಿನ್ನೆಲೆಯಲ್ಲಿ ಪೋಲೀಸರು ನಾಲ್ಕೂ ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಹಾಗೂ ಧರ್ಮಭೇದದ ವಿಷಬೀಜ ಬಿತ್ತಿದರೆಂಬ ಆರೋಪಕ್ಕೊಳಗಾಗಿರುವ ಪ್ರವೀಣ್, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುವುದಾಗಿ ಹೇಳಿದ ಕಾರಣ ಪ್ರಕರಣ ಇತ್ಯರ್ಥಗೊಂಡ ಘಟನೆ ವರದಿಯಾಗಿದೆ.
ದೈವಸ್ಥಾನದ ವಠಾರದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರನ್ನು ತರಾಟೆಗೆತ್ತಿಕೊಳ್ಳುವ ವೇಳೆ ಪ್ರವೀಣ್ ಕುಮಾರ್ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮೀಯರ ಭಾವನೆಗೆ ಧಕ್ಕೆಯಾಗುವಂತೆ ಮಾತನಾಡಿದ್ದರೆಂದು ಆರೋಪ ಬಂದಿತ್ತು. ” ಇದು ಹಿಂದೂ ದೈವಸ್ಥಾನವಾದುದರಿಂದ ನೀನು ಇಲ್ಲಿಂದ ಹೊರಹೋಗು ” ಎಂದು ಕ್ರಿಶ್ಚಿಯನ್ ಯುವಕರೊಬ್ಬರನ್ನು ಪ್ರವೀಣ್ ಹೊರಕಳಿಸಿದ್ದರು. ಈ ವೀಡಿಯೋ ವೈರಲ್ ಆಗಿ ಸಂಚಲನ ಮೂಡಿತ್ತು.ಪ್ರವೀಣ್ ಮೇಲೆ ಪೋಲೀಸರಿಗೆ ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದವರಿಂದ ಮನವಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಜು.14 ರಂದು ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಎಸ್.ಐ. ಎಂ.ಆರ್.ಹರೀಶ್ ರವರು ದೈವಸ್ಥಾನದವರನ್ನು, ಕ್ರಿಕೆಟ್ ಆಡುತ್ತಿದ್ದ ಯುವಕರನ್ನು, ಸ್ಥಳೀಯ ಕ್ರೈಸ್ತ ಮುಖಂಡರನ್ನು, ಸ್ಥಳೀಯ ಮುಸ್ಲಿಂ ಮುಖಂಡರನ್ನು ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು.
ಜಯನಗರ ಕೊರಂಬಡ್ಕ ಶ್ರೀ ಆದಿ ಮೊಗೇರ್ಕಳ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ವಸಂತ ಕುತ್ಪಾಜೆ , ವಾರ್ಷಿಕ ನೇಮೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಅರ್ಚಕ ಉಮೇಶ್, ಮುಸ್ಲಿಂ ಸಮುದಾಯದ ಮುಖಂಡ ಮಹಮ್ಮದ್ ಮೊಟ್ಟೆತೋಡಿ, ಕ್ರೈಸ್ತ ಸಮುದಾಯದ ಮುಖಂಡರಾದ ಶ್ರೀಮತಿ ಜೂಲಿಯಾನ ಕ್ರಾಸ್ತ, ರಿಚರ್ಡ್ ಕ್ರಾಸ್ತ, ಡೇವಿಡ್ ಧೀರ ಕ್ರಾಸ್ತ, ನವೀನ್ ಮಚಾದೊ, ಕ್ರಿಕೆಟ್ ಆಟದ ತಂಡದ ಸದಸ್ಯ ಮನೋಜ್ , ಲೋಕೇಶ್, ಹರೀಶ್, ರಾಜೇಶ್ ಮೊದಲಾದವರು ಮಾತುಕತೆಯಲ್ಲಿ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ್ ಕುಮಾರ್ ರವರು ” ದೈವಸ್ಥಾನದ ಆವರಣದಲ್ಲಿ ಆಟವಾಡಲು ಬಂದ ಕ್ರಿಶ್ಚಿಯನ್ ಸಮುದಾಯದ ಯುವಕ ನಾವು ಮಾತನಾಡುತ್ತಿದ್ದ ಸಂದರ್ಭ ಮಧ್ಯಪ್ರವೇಶಿಸಿ ನನ್ನ ಮೇಲೆ ಕೈ ತೋರಿದಾಗ ನಾನು ಅವರನ್ನು ಇಲ್ಲಿಂದ ಹೊರ ಹೋಗಲು ಹೇಳಿದ್ದೆ. ಹಿಂದೂ ಸಮುದಾಯದ ದೈವಸ್ಥಾನವಾದ ಕಾರಣ ಇಲ್ಲಿಗೆ ಇತರ ಸಮುದಾಯದವರು ಆಟವಾಡಲು ಬರಬಾರದು ಎಂದು ಮಾತ್ರ ನಾನು ಹೇಳಿದ್ದೇನೆ” ಎಂದು ಸ್ಪಷ್ಟನೆ ನೀಡಿದರು.
ಈ ಸಮಯ ವೃತ್ತ ನಿರೀಕ್ಷಕರು ಇತರ ಸಮುದಾಯದವರ ಬಗ್ಗೆ ನೀವು ಮಾತನಾಡಿರುವ ವಿಡಿಯೋ ತುಣುಕುಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದು ಸಾರ್ವಜನಿಕ ಸ್ಥಳದಲ್ಲಿ ಅನ್ಯ ಸಮುದಾಯದವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.
ಆಗ ದೈವಸ್ಥಾನದ ಅಧ್ಯಕ್ಷ ವಸಂತ ಕುದ್ಪಾಜೆ ಯವರು ” ಇಲ್ಲಿ ಕ್ರಿಕೆಟ್ ಆಡಬಾರದೆಂದು ಪ್ರವೀಣ್ ಹೇಳಿರುವುದನ್ನು ನಾವು ಒಪ್ಪುತ್ತೇವೆ. ಆದರೆ ಇತರ ಧರ್ಮದವರ ಬಗ್ಗೆ ಪ್ರವೀಣ್ ಹೇಳಿದ್ದು ಸರಿಯಲ್ಲ ಎಂದರು. ಆಗ ರಿಚರ್ಡ್ ಕ್ರಾಸ್ತ ಹಾಗೂ ಜೂಲಿಯಾನ ಕ್ರಾಸ್ತ ರವರು ” ಪ್ರವೀಣ ಊರಿನ ಸೌಹಾರ್ದತೆ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ” ಎಂದು ದೂರಿಕೊಂಡರು. ” ಜಯನಗರದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಇದ್ದೇವೆ. ಮುಸ್ಲಿಂ ಯುವಕರು ಅಲ್ಲಿಗೆ ಕ್ರಿಕೆಟ್ ಆಡಲು ಹೋಗಿಲ್ಲ. ಆದ್ದರಿಂದ ಸೌಹಾರ್ದತೆ ಕೆಡಿಸುವ ರೀತಿಯಲ್ಲಿ ಪ್ರವೀಣ್ ಮಾತಾಡಿದ್ದು ತಪ್ಪು ” ಎಂದು ಮಹಮ್ಮದ್ ಮುಟ್ಟತ್ತೋಡಿ ಹೇಳಿದರು.
” ಯುವಕರು ಅಲ್ಲಿ ಕ್ರಿಕೆಟ್ ಆಡುವಾಗ ಬಾಲ್ ನಮ್ಮ ಮನೆಗೆ ಬಂದು ಸಮಸ್ಯೆಯಾಗುತ್ತಿದೆ ” ಎಂದು ಸ್ಥಳೀಯರಾದ ದೀಕ್ಷಿತ್ ಕುಮಾರ್ ಹೇಳಿದರು. ಕ್ರಿಕೆಟ್ ಆಡುವ ಯುವಕರ ಪರವಾಗಿ ಮಾತನಾಡಿದ ಲೋಕೇಶ್, ಇನ್ನು ಮುಂದೆ ನಾವು ಅಲ್ಲಿ ಕ್ರಿಕೆಟ್ ಆಡುವುದಿಲ್ಲ ಎಂದು ಒಪ್ಪಿಕೊಂಡರು. ಎಸ್.ಐ. ಹರೀಶ್ ರವರು ಪ್ರವೀಣ್ ಗೆ ಎಚ್ಚರಿಕೆ ಮಾತುಗಳನ್ನು ಹೇಳಿದರು. ಕೊನೆಯಲ್ಲಿ ಪ್ರವೀಣ್ ” ನನ್ನಿಂದ ತಪ್ಪಾಗಿದೆ. ನನ್ನ ಮಾತಿನಿಂದ ಯಾವುದಾದರೂ ಸಮುದಾಯದವರಿಗೆ ನೋವಾಗಿದ್ದರೆ ಕ್ಷಮೆ ಕೋರುವುದಾಗಿ” ಹೇಳಿದರು.
ಈ ವೇಳೆ ಮಾತನಾಡಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಹರೀಶ್ ಎಂ ಆರ್ ” ಈಗಾಗಲೇ ತಾವುಗಳು ನೀಡಿರುವ ದೂರುಗಳು ಕ್ರಮಬದ್ಧವಾಗಿ ಇರುವುದಿಲ್ಲ . ದೂರು ದಾಖಲಿಸಬೇಕಾದರೆ ದೂರು ನೀಡುವ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ದೂರು ನೀಡಬೇಕು. ಹಾಗೆ ನೀಡಿದರೆ ದೂರನ್ನು ದಾಖಲು ಮಾಡಿ ತನಿಖೆ ನಡೆಸುತ್ತೇವೆ” ಎಂದು ತಿಳಿಸಿದರು. ನಂತರ ಠಾಣೆಯಿಂದ ಹೊರಬಂದ ಎಲ್ಲಾ ತಂಡದ ಸದಸ್ಯರು ಪರಸ್ಪರ ಮಾತನಾಡಿಕೊಂಡು ನಾವೆಲ್ಲರೂ ಒಂದೇ ಊರಿನವರಾಗಿದ್ದು ಸಣ್ಣ ವಿಷಯವನ್ನು ದೊಡ್ಡದು ಮಾಡದೆ ಮಾತನಾಡಿ ಪರಿಹರಿಸಿಕೊಳ್ಳೋಣ ಎಂದು ತೀರ್ಮಾನಿಸಿಕೊಂಡರು.
ಈ ಸಂದರ್ಭದಲ್ಲಿ ವಸಂತ ಕುತ್ಪಾಜೆ ನಮ್ಮ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ ರವರು ಆಡಿರುವ ಮಾತಿನಿಂದ ಯಾವುದಾದರೂ ಸಮುದಾಯಕ್ಕೆ ನೋವಾಗಿದ್ದಲ್ಲಿ ಅವರ ಪರವಾಗಿ ಸಮಿತಿ ವತಿಯಿಂದ ಕ್ಷಮೆ ಕೋರುವುದಾಗಿ ಹೇಳಿಕೆ ನೀಡಿದರು.