ವಿಟ್ಲ: ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಮತ್ತು ಮಾಜಿ ಅಧ್ಯಕ್ಷೆ ದಮಯಂತಿ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಶೋಕ್ ಕುಮಾರ್ ಶೆಟ್ಟಿ ಅವರು ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದು, ಈ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ ಪಕ್ಷದಲ್ಲಿ ಕೆಲಸ ಮಾಡಿದ್ದರು. ಸತತ ನಾಲ್ಕು ಬಾರಿ ಚುನಾವಣೆಯಲ್ಲಿ ಜಯಗಳಿಸಿ, ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ಒಂದು ಬಾರಿ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಕೇವಲ ರಾಜಕೀಯ ಕ್ಷೇತ್ರವಲ್ಲದೇ ಉತ್ತಮ ಕ್ರೀಡಾಪಟುವಾಗಿದ್ದು, ದೇಹದಾರ್ಢ್ಯ ಸ್ಫರ್ಧೆಯಲ್ಲಿ ಪದಕ ಪಡೆದಿದ್ದರು. ದಮಯಂತಿ ಅವರು ವಿಟ್ಲ ಪಟ್ಟಣ ಪಂಚಾಯಿತಿಯ ಎರಡನೇ ಅವಧಿಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದರು. ವಿಟ್ಲ ಪಟ್ಟಣ ಪಂಚಾಯಿತಿ ಐದು ವರ್ಷಗಳ ಆಡಳಿತ ಇದೇ 15ಕ್ಕೆ ಕೊನೆಗೊಳ್ಳಲಿದ್ದು, ಇದರ ನಡುವೆ ಇವರ ರಾಜೀನಾಮೆ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಇವರಿಬ್ಬರು ಬಿಜೆಪಿ ಪಕ್ಷ ಸೇರಲಿದ್ದಾರೆಂಬ ಮಾತುಗಳು ಸಾರ್ವಜಿಕ ವಲಯದಿಂದ ಕೇಳಿ ಬರುತ್ತಿದೆ.