ಸುಳ್ಯ: ಮದುವೆ ಸಮಾರಂಭಕ್ಕೆ ರಾತ್ರಿ ವೇಳೆ ಅಧಿಕಾರಿಗಳು ದಾಳಿ ನಡೆಸಿ ಬಾಲ್ಯವಿವಾಹವೊಂದನ್ನು ತಡೆದ ಘಟನೆ ಇಲ್ಲಿನ ನಗರ ಪಂಚಾಯತ್ ವ್ಯಾಪ್ತಿಯ ದುಗಲಡ್ಕದ ಕಂದಡ್ಕ ಎಂಬಲ್ಲಿ ನಡೆದಿದೆ.
ಜು.15 ರಂದು ತಮಿಳು ಕುಟುಂಬವೊಂದರ ಯುವಕನ ಜೊತೆ ಮೈಸೂರಿನ ಹುಡುಗಿಯನ್ನು ಮದುವೆ ಮಾಡಿಸುವುದಾಗಿ ಸಿದ್ದತೆ ನಡೆದಿತ್ತು. ಆದರೆ ಅಪ್ರಾಪ್ತ ಬಾಲಕಿಗೆ 18 ವರ್ಷ ಆಗಿರಲಿಲ್ಲ ಎಂಬ ಮಾಹಿತಿಯನ್ನು ಆಧಾರಿಸಿ ಪೊಲೀಸರ ನೆರವಿನೊಂದಿಗೆ ಸಿ.ಡಿ.ಪಿ.ಒ. ಶ್ರೀಮತಿ ರಶ್ಮಿ ಅಶೋಕ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಹುಡುಗಿ ಕಡೆಯವರು ಮದುವೆ ಕಾರ್ಯಕ್ಕೆ ಮೈಸೂರಿನಿಂದ ಬಂದಿದ್ದರು. ಈ ವೇಳೆ ಅವರೊಂದಿಗೆ ವಿಚಾರಿಸಿದಾಗ ಹುಡುಗಿಯ ವಯಸ್ಸಿಗೆ ಸಂಬಂಧಿಸಿದ ದಾಖಲೆಯನ್ನು ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಆದರೆ ಅಧಿಕಾರಿಗಳು ಬಾಲ್ಯವಿವಾಹದ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡಿದ್ದು, ಇದಕ್ಕೆ ಹುಡುಗಿಯ ಕಡೆಯವರು 18 ವರ್ಷ ತುಂಬಿದ ಬಳಿಕವೇ ಮದುವೆ ಮಾಡಿಸುವುದಾಗಿ ಹೇಳಿ ಮೈಸೂರಿಗೆ ಹಿಂತಿರುಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ದಾಳಿ ವೇಳೆಯಲ್ಲಿ ಸಿ.ಡಿ.ಪಿ.ಒ ಜೊತೆ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮಕರಣಿಕ ತಿಪ್ಪೇಶ್, ಪೋಲೀಸರು ಭಾಗವಹಿಸಿದ್ದರು.