ಬೆಂಗಳೂರು: ಇನ್ಫೋಸಿಸ್ ಸಂಸ್ಥೆಯು 2022ನೇ ಹಣಕಾಸು ವರ್ಷದಲ್ಲಿ ದೊಡ್ಡಮಟ್ಟದ ರೆಕ್ರೂಟ್ಮೆಂಟ್ ಗೆ ಹೊರಟಿದೆ. ಬೆಂಗಳೂರು ಮೂಲದ ಈ ಜಾಗತಿಕ ಕಂಪನಿಯು, ಜಾಗತಿಕವಾಗಿ 35,000 ಕಾಲೇಜು ಪದವೀಧರರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ. ಈ ಕುರಿತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಪ್ರವೀಣ್ ರಾವ್ ತಿಳಿಸಿದ್ದಾರೆ. ಏರುತ್ತಿರುವ ಡಿಜಿಟಲ್ ಬೇಡಿಕೆಯನ್ನು ಪೂರೈಸಲು ಈ ಬಾರಿ ಪ್ರತಿಭಾವಂತ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇನ್ಫೋಸಿಸ್ ಯೋಜಿಸಿದೆ ಎಂದವರು ತಿಳಿಸಿದ್ದಾರೆ.
ಮಾರ್ಚ್ ತ್ರೈಮಾಸಿಕಕ್ಕೆ ಹೋಲಿಸಿದರೆ 2.59 ಲಕ್ಷ ಇದ್ದ ಉದ್ಯೋಗಿಗಳ ಸಂಖ್ಯೆ ಜೂನ್ ತ್ರೈಮಾಸಿಕದ ಕೊನೆಯಲ್ಲಿ 2.67 ಲಕ್ಷಕ್ಕೆ ಏರಿದೆ. 2022ನೇ ಹಣಕಾಸು ವರ್ಷದಲ್ಲಿ ಅದು ಮತ್ತೆ 35000 ದಷ್ಟು ಹೆಚ್ಚಾಗಲಿದೆ. ಕಂಪೆನಿಯು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 10.9% ಇದ್ದ ಉದ್ಯೋಗಿಗಳ ಆಟ್ರಿಶನ್ ರೇಟ್ ( ಕಂಪನಿಯನ್ನು ಬಿಟ್ಟು ಹೋಗುವವರ ಸಂಖ್ಯೆ) ಈ ತ್ರೈಮಾಸಿಕದಲ್ಲಿ 13.9% ನಷ್ಟು ಹೆಚ್ಚಳ ಆಗಿದ್ದು, ಇದರಿಂದ ತಲೆಕೆಡಿಸಿಕೊಂಡಿರುವ ಕಂಪನಿಯು ಹೊಸ ರಿಕ್ರೂಟ್ಮೆಂಟ್ ಮೂಲಕ ತನ್ನ ಬೆಂಚ್ ಸ್ಟ್ರೆಂತ್ ಅನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ಇನ್ಫೋಸಿಸ್ನಲ್ಲಿ ಒಟ್ಟು ಉದ್ಯೋಗಿಗಳ ಪೈಕಿ 38.6% ಮಹಿಳೆಯರು ಈಗ ಇದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದೀಗ ಹೆಚ್ಚುತ್ತಿರುವ ಡಿಮಾಂಡ್ ಅನ್ನು ಸರಿದೂಗಿಸಲು ಇನ್ಫೋಸಿಸ್ ಪ್ರಪಂಚದಾದ್ಯಂತ ಒಟ್ಟು 35000 ಹೊಸ ಉದ್ಯೋಗ ಅವಕಾಶವನ್ನು ಸೃಷ್ಟಿಸಿದೆ. ಹೆಚ್ಚುಕಮ್ಮಿ ತನ್ನ 35,000 ಹೊಸ ಉದ್ಯೋಗಾವಕಾಶಗಳನ್ನು ಕ್ಯಾಂಪಸ್ ಇಂಟರ್ವ್ಯೂ ನಡೆಸುವ ಮೂಲಕ ತುಂಬಿಕೊಳ್ಳಲಿದೆ.