ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಪರವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಸದನದಲ್ಲಿ ಕೆಲವು ಬೇಡಿಕೆಗಳನ್ನು ಮುಂದಿಟ್ಟರು.
ಅಂಗನವಾಡಿ ಕಾರ್ಯಕರ್ತೆಯರು ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತಿರುವವರು. ಪುಟಾಣಿ ಮಕ್ಕಳ ಆರೈಕೆ,ಅವರಿಗೆ ಆಟ ಪಾಠ ಕಲಿಸುವ ಬಹಳ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡವರು. ಈ ಎಲ್ಲಾ ಜವಾಬ್ದಾರಿಗಳ ಜೊತೆಗೆ ಸರಕಾರ ವಹಿಸುವ ಎಲ್ಲಾ ಇತರೆ ಕೆಲಸ ಕಾರ್ಯಗಳನ್ನು, ಚುನಾವಣಾ ಜವಾಬ್ದಾರಿಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವವರೂ ಇವರೆ,ಇಂತಹ ಹಲವು ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕತೆಯರಿಗೆ ಸಮರ್ಪಕವಾದ ವೇತನ ಮತ್ತು ನಿವೃತ್ತಿ ನಂತರದ ಪಿಂಚಣಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಸದನದ ಕಲಾಪದಲ್ಲಿ ಹರೀಶ್ ಪೂಂಜಾ ಪ್ರಶ್ನಿಸಿದರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಶಶಿಕಲಾ ಜೊಲ್ಲೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ದಿಂದ ಬೆಳ್ತಂಗಡಿ ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ನಮ್ಮ ಅಳಲಿಗೆ ಹರೀಶ್ ಪೂಂಜಾ ರವರು ದನಿ ನೀಡಿದ್ದಾರೆಂದು ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.