ಬಂಟ್ವಾಳ: ಮಂಗಳೂರಿನ ‘ಗುರುಬೆಳದಿಂಗಳು’ ಸಂಸ್ಥೆಯ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಎಂಬಲ್ಲಿ ನಿರ್ಮಾಣಗೊಂಡ ಚಿತ್ರಾಕ್ಷಿ ಅವರ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಗುರುವಾರ ನಡೆಯಿತು.
ಪಣಂಬೂರು ಎಸಿಪಿ ಮಹೇಶ್ ಕುಮಾರ್ ಅವರು ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಲವಾರು ಗೃಹಪ್ರವೇಶಕ್ಕೆ ಹೋಗಿದ್ದೇನೆ. ಆದರೆ ಇದೊಂದು ಹೃದಯಸ್ಪರ್ಷಿ ಗೃಹಪ್ರವೇಶದ ಕಾರ್ಯಕ್ರಮ ಎಂದರು. ಯುವಕರ ತಂಡವನ್ನು ಕಟ್ಟಿಕೊಂಡು ಸಮಾಜಕ್ಕೆ ಆಸರೆಯಾಗುವಂತಹ ಕಾರ್ಯಕ್ರಮವನ್ನು ಗುರುಬೆಳದಿಂಗಳು ತಂಡ ಮಾಡುತ್ತಿದೆ. ಇಂತಹ ಸಂಘ ಸಂಸ್ಥೆಗಳ ಅಗತ್ಯತೆ ಸಮಾಜಕ್ಕೆ ಇದೆ. ಇದು ಯುವ ಸಮುದಾಯಕ್ಕೆ ಮಾದರಿ ಎಂದು ತಿಳಿಸಿದರು.
ಗುರು ಬೆಳದಿಂಗಳು ಸಂಘಟನೆಯ ಅಧ್ಯಕ್ಷ ಪದ್ಮರಾಜ್ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುಬೆಳದಿಂಗಳು ಸಂಘಟನೆಗೆ ಇಂತಹ ಸೇವಾ ಕಾರ್ಯಗಳನ್ನು ಮಾಡಲುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಯವರು ಗೋಕರ್ಣ ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯ ಪ್ರೇರಣೆ ನೀಡಿದೆ. ಬಡವರ ಕಣ್ಣೊರೆಸುವ ಕಾರ್ಯ ಆಗಬೇಕು ಎನ್ನುವ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಆಸರೆ ಎನ್ನುವ ಧ್ಯೆಯೋದ್ದೇಶಗಳನ್ನಿಟ್ಟುಕೊಂಡು ಇಂತಹ ಸೇವಾ ಕಾರ್ಯಕ್ರಮ ಮಾಡುತ್ತಿದ್ದೇವೆ.ಯುವಕರ ಪರಿಶ್ರಮದಿಂದ ಹಾಗೂ ಹಲವು ಮಂದಿ ದಾನಿ ಸಹಕಾರದಿಂದ ಮನೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಗೋಕರ್ಣ ಕ್ಷೇತ್ರದ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ವಿವೇಕ್ ರಾಜ್ ಪೂಜಾರಿ, ಉದ್ಯಮಿ ಕಿಶೋರ್ ದಂಡಕೇರಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ವಿಷ್ಣುದಾಸ್ , ರಾಜೇಂದ್ರ ಚಿಲಿಂಬಿ, ಪ್ರೇಮನಾಥ್, ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಜೇಶ್ ಸುವರ್ಣ ವಂದಿಸಿದರು. ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.