ಪುತ್ತೂರು: ಅಕ್ರಮ ಗೋ ಸಾಗಾಣಿಕೆ ತಡೆಯಲು ಆಯಾಕಟ್ಟಿನ ಸ್ಥಳಗಳಲ್ಲಿ ಚೆಕ್‍ಪೋಸ್ಟ್ ಗಳ ನಿರ್ಮಾಣ ಮಾಡಬೇಕು. ಜುಲೈ 21ರಂದು ನಡೆಯುವ ಬಕ್ರೀದ್ ಹಬ್ಬಗಳ ನೆಪವೊಡ್ಡಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ನಡೆಸುವವರ ವಿರುದ್ದ ಗೋಹತ್ಯೆ ಮತ್ತು ಕುರ್ಬಾನಿ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ಮತ್ತು ಪುತ್ತೂರು ನಗರ ಸಮಿತಿ ವತಿಯಿಂದ ಗ್ರಾಮಾಂತರ ಸಂಪ್ಯ ಪೊಲೀಸ್ ಠಾಣೆಗೆ ಮನವಿ ನೀಡಲಾಯಿತು.
ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಾರ್ವಜನಿಕವಾಗಿ ಗೋಹತ್ಯೆ ನಡೆಯುತ್ತಿದೆ. ಬಕ್ರೀದ್ ಹಬ್ಬದ ಹೆಸರಿನಲ್ಲಿ ಮತ್ತೆ ಕುರ್ಬಾನಿ ಎಂದು ಗೋವಧೆ ಮಾಡಲಾಗುತ್ತಿದೆ. ಗೋ ಹಂತಕರಿಗೆ ಹೊಸ ಕಾನೂನು ಜಾರಿ ಮಾಡಬೇಕಾಗಿದೆ. ಪಶು ಸಂಗೋಪಣೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಗೋಹತ್ಯೆ ನಡೆಸುವ ಸ್ಥಳಕ್ಕೆ ದಾಳಿ ಮಾಡಬಹುದೆಂದು ಕಾನೂನು ಇದ್ದರೂ ಯಾವುದೇ ಕ್ರಮಗಳನ್ನು ಜರಗಿಸಲಾಗುತ್ತಿಲ್ಲ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪಾಣಾಜೆ, ಗಾಳಿಮುಖ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್ ನಿರ್ಮಿಸಬೇಕು. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಡ್ಕ, ಸಾಲ್ಮರ ಹಾಗೂ ಕೆಮ್ಮಾಯಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳ ವಿರುದ್ದ ಹೊಸ ಗೋಹತ್ಯೆ ನಿಷೇದ ಕಾಯ್ದೆ 2020ರ ಅನ್ವಯ ಪ್ರಕರಣ ದಾಖಲಿಸಿ ಕ್ರಮ ಜರಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರಾದ ವಿಶಾಖ್ ಸಸಿಹಿತ್ಲು, ಹರೀಶ್ ಕುಮಾರ್ ದೋಳ್ಪಾಡಿ,ರವಿಕುಮಾರ್ ಕೈತಡ್ಕ ಕಿರಣ್ ಕುಮಾರ್ ರಾಮಕುಂಜ, ಪ್ರವೀಣ್ ಕಲ್ಲೇಗ, ರೂಪೇಶ್ ಶೇವಿರೆ, ಚೇತನ್ ಬೊಳುವಾರು, ಪ್ರಜ್ವಲ್ ಸಂಪ್ಯ, ಮಿಥುನ್ ತೆಂಕಿಲ, ಹರ್ಷಿತ್ ಬಲ್ನಾಡು ಮತ್ತಿತರರು ಉಪಸ್ಥಿತರಿದ್ದರು.