ಬೆಂಗಳೂರು: ಜುಲೈ 21ರಂದು ನಡೆಯಲಿರುವ ಬಕ್ರೀದ್ ಹಬ್ಬದ ಆಚರಣೆ ಸಂದರ್ಭ ಮಸೀದಿಗಳಲ್ಲಿ ಒಮ್ಮೆಗೆ 50 ಮಂದಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖೆ ಆದೇಶ ಹೊರಡಿಸಿದೆ.
ಮಾರ್ಗಸೂಚಿಯಲ್ಲಿ, “ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಮಾಜ್ ಮಾಡುವ ವೇಳೆ ಕನಿಷ್ಠ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಮಸೀದಿ ಪ್ರವೇಶಿಸಿವ ಮೊದಲು ದೇಹದ ತಾಪಮಾನ ಪರೀಕ್ಷಿಸಬೇಕು. ಸೋಪು ಅಥವಾ ಸ್ಯಾನಿಟೈಸರ್ನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು” ಎಂದು ತಿಳಿಸಲಾಗಿದೆ.
“ಪ್ರಾರ್ಥನೆ ಸಲ್ಲಿಸಲು ಅಗತ್ಯವಿರುವ ಮುಸಲ್ಲಾವನ್ನು ಮನೆಯಿಂದಲೇ ತರುವಂತೆ ಸೂಚಿಸಬೇಕು.ಆಲಿಂಗನ ಹಾಗೂ ಹಸ್ತಲಾಘವಕ್ಕೆ ಅವಕಾಶ ಇಲ್ಲ. 50ಕ್ಕಿಂತಾ ಅಧಿಕ ಮಂದಿ ಸೇರಿದಲ್ಲಿ ಪ್ರಾರ್ಥನೆ ಸಲ್ಲಿಸಲು ಪಂಕ್ತಿಯ ಆಧಾರದಲ್ಲಿ ವ್ಯವಸ್ಥೆ ಮಾಡಬೇಕು” ಎಂದು ಸೂಚಿಸಲಾಗಿದೆ. ಇನ್ನು ಬಕ್ರೀದ್ ಹಬ್ಬದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ನಿಷೇಧಿಸಲಾಗಿದೆ.
“ಆಸ್ಪತ್ರೆಗಳ ಆವರಣಗಳು ಸೇರಿದಂತೆ ಶಾಲಾ, ಕಾಲೇಜುಗಳ ಒಳಾಂಗಣ ಹಾಗೂ ಹೊರಾಂಗಣ, ರಸ್ತೆಗಳು, ನರ್ಸಿಂಗ್ ಹೋಂಗಳ ಒಳ ಮತ್ತು ಹೊರಾಂಗಣಗಳು, ಉದ್ಯಾನದ ಒಳಗೆ, ಹೊರಗೆ, ಪಾದಚಾರಿ ಮಾರ್ಗಗಳು, ಆಟದ ಮೈದಾನ, ಮಸೀದಿ, ಇತರೆ ಧಾರ್ಮಿಕ ಸ್ಥಳಗಳು ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.