ಬೆಳ್ತಂಗಡಿ: ಪತ್ನಿಯನ್ನು ತವರಿನಲ್ಲಿ ಬಿಟ್ಟು ಅಲ್ಲಿಂದ ನಾದಿನಿ ಜೊತೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ : ದೂರದಾರರಾಗಿದ್ದ ಮಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳು ಹಾಗೂ ಅಳಿಯ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಈ ವೇಳೆ ನಾದಿನಿ ರೈಹಾನಾಳ ಜೊತೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ, ಫೋನ್ ಮುಖಾಂತರ ಸಂಭಾಷಣೆ ನಡೆಸುತ್ತಿದ್ದರು .
ಇತ್ತೀಚೆಗೆ ಹಿರಿಯ ಮಗಳು ಹಾಗೂ ಅಳಿಯನಿಗೆ ಮನಸ್ತಾಪ ಉಂಟಾಗಿ, ಪತ್ನಿ ಸೌಧಾ ತನ್ನ ತವರು ಮನೆಯಲ್ಲಿದ್ದು, ಜುಲೈ 8ರಂದು ಬೆಳಗ್ಗೆ ಮುಸ್ತಾಫಾ ಹಾಗೂ ಅವರ ತಾಯಿ ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದರು. ಈ ವೇಳೆ ರೈಹಾನಾ ಮನೆಯಲ್ಲಿ ಯಾರಿಗೂ ಹೇಳದೇ ಬ್ಯಾಗೊಂದನ್ನು ಹಿಡಿದುಕೊಂಡು ಆ ಕಾರಿನಲ್ಲಿ ಹೋಗಿದ್ದಳು.
ತನ್ನ ಕಿರಿಯ ಪುತ್ರಿ ಹಿರಿಯ ಪುತ್ರಿಯ ಗಂಡನೊಂದಿಗೆ ತೆರಳಿದ್ದು ಈವರೆಗೆ ಮನೆಗೆ ವಾಪಾಸ್ಸಾಗದೇ ಕಾಣೆಯಾಗಿದ್ದಾಳೆ ಎಂದು ತಂದೆ ಮಹಮ್ಮದ್ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯವನ್ನು ಕೈಗೆತ್ತಿಕೊಂಡ ಪೊಲೀಸರು ಇಬ್ಬರನ್ನೂ ಕೊಡಗಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ವೇಳೆ ರೈಹಾನಾ ತನ್ನ ತಾಯಿ ಮನೆಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಮಂಗಳೂರು ರಿಮಾಂಡ್ ಹೋಂ ಗೆ ಕಳುಹಿಸಲು ನ್ಯಾಯಾಲಯ ಆದೇಶ ನೀಡಿದೆ.