ಬೆಂಗಳೂರು: ಕರ್ನಾಟಕ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷೆಯನ್ನಾಗಿ ಶೃತಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆಯಾಗಿದ್ದ ಶೃತಿ ಅವರನ್ನು ನಿನ್ನೆಯಷ್ಟೇ ಆ ಸ್ಥಾನದಿಂದ ಕೆಳಗಿಳಿಸಿ, ಸಿಎಂ ಆಪ್ತ ಕಾಪು ಸಿದ್ಧಲಿಂಗಸ್ವಾಮಿಗೆ ನೀಡಲಾಗಿತ್ತು.
ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ, “ಮುಖ್ಯಮಂತ್ರಿ ಅವರ ಗೃಹ ಕಚೇರಿಯ ಟಿಪ್ಪಣಿಯಂತೆ ಶೃತಿಯವರನ್ನು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ” ಎಂದು ತಿಳಿಸಿದ್ದಾರೆ.
ನಟಿ ಶೃತಿ ಅವರನ್ನು ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆಯಾಗಿ ನೇಮಕ ಮಾಡಲಾಗಿತ್ತು. ಆದರೆ, ನಿನ್ನೆ ಸಿಎಂ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಆ ಹುದ್ದೆಗೆ ಸೇರ್ಪಡೆಗೊಳಿಸಿ ಆದೇಶಿಸಲಾಗಿತ್ತು. ಇದರ ಬೆನ್ನಲ್ಲೇ ಶೃತಿ ಅವರನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷೆಯನ್ನಾಗಿ ನೇಮಿಸಿ ಆದೇಶಿಸಿದೆ.