ಪುತ್ತೂರು: ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಕಟ್ಟತ್ತಾರು-ಗೋಳ್ತಿಲ ರಸ್ತೆಗೆ ಶಾಸಕರ ಅನುದಾನ ರೂ.5 ಲಕ್ಷದಲ್ಲಿ 110 ಮೀಟರ್ ಕಾಂಕ್ರಿಟೀಕರಣವಾಗುತ್ತಿದ್ದು ಇದು ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ ಘಟನೆ ಜು.19ರಂದು ನಡೆಯಿತು.
ಕಾಂಕ್ರಿಟೀಕರಣದ ಮೊದಲು 3 ಇಂಚುನಷ್ಟು ಜಲ್ಲಿಕಲ್ಲು ಹಾಕಬೇಕಿದ್ದರೂ ಇದನ್ನು ಹಾಕಿಲ್ಲ, ಮಣ್ಣಿನ ಮೇಲೆಯೇ ಕಾಂಕ್ರಿಟೀಕರಣ ಮಾಡುತ್ತಿದ್ದಾರೆ ಎಂದು ಸ್ಥಳೀಯ ರಾಜೇಶ್ ಮಯೂರ ಗೋಳ್ತಿಲ ಮತ್ತಿತರರು ಆರೋಪಿಸಿದರು. ಕಾಮಗಾರಿ ನೋಡಿಕೊಳ್ಳುತ್ತಿದ್ದವರಲ್ಲಿ ಕಾಮಗಾರಿ ನಿಲ್ಲಿಸುವಂತೆ ತಿಳಿಸಿದರು. ಈ ನಡುವೆ ಕೆಲಹೊತ್ತು ಕಾಮಗಾರಿಯನ್ನು ನಿಲ್ಲಿಸಲಾಯಿತು. ಬಳಿಕ ಗುತ್ತಿಗೆದಾರರಲ್ಲಿ ಮಾತುಕತೆ ನಡೆಸಿದ ಸ್ಥಳೀಯರು ಕಾಮಗಾರಿ ಸರಿಯಾದ ರೀತಿಯಲ್ಲಿ ಮಾಡಿಕೊಡುವಂತೆ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಕೆಯ್ಯೂರು ಗ್ರಾಪಂ ಸದಸ್ಯ ಶರತ್ ಕುಮಾರ್ ಮಾಡಾವುರವರು ಈ ಬಗ್ಗೆ ಸ್ಥಳೀಯರಲ್ಲಿ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಕಾಮಗಾರಿಯನ್ನು ಮುಂದುವರಿಸಲಾಯಿತು ಎಂದು ತಿಳಿದುಬಂದಿದೆ.