ಪುತ್ತೂರು :ಭರದಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಹೆಜ್ಜೆಯನ್ನಿಡುತ್ತಿರುವ ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ ಗರ್ಭನ್ಯಾಸ ಕಾರ್ಯಕ್ರಮವು ರಾತ್ರಿಯ ಶುಭ ಸಂದರ್ಭದಲ್ಲಿ ನಡೆಯಿತು.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳ ಮೂಲಕ ಷಡಾಧಾರ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮವು ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ನಾಗೇಶ್ ಕಣ್ಣಾರಾಯ, ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಕಾಸರಗೋಡು, ಶಿಲಾ ಕಲ್ಲಿನ ಶಿಲ್ಪಿ ನಾಗರಾಜ ವೀರಕಂಭ ಹಾಗೂ ದೇವಸ್ಥಾನದ ಆಡಳಿತಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಸೇರಿದಂತೆ 500ಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.
ಷಡಾಧಾರ ಪ್ರತಿಷ್ಠೆಯ ದಿನ ಭಕ್ತಾದಿಗಳು ನಿಧಿಕುಂಭಕ್ಕೆ ಚಿನ್ನ ಹಾಗೂ ಬೆಳ್ಳಿಯ ನಾಣ್ಯಗಳನ್ನು ಮತ್ತು ನವರತ್ನಗಳನ್ನು ಸಮರ್ಪಿಸಿದರು.ದೇವಸ್ಥಾನವು ಈ ಶುಭ ಸಂದರ್ಭದಲ್ಲಿ ವಿಶೇಷವಾಗಿ ಸರ್ವಾಲಂಕಾರ ಭೂಷಿತವಾಗಿ ಕಂಗೊಳಿಸುತ್ತಿದ್ದು, ಈ ಎಲ್ಲಾ ಅಲಂಕಾರ ಭಕ್ತರಿಂದಲ್ಲೇ ನೆರವೇರಿದ್ದಾಗಿತ್ತು ಅನ್ನುವುದು ಮತ್ತೂ ವಿಶೇಷ.. ಕೆದಂಬಾಡಿ, ಕೆಯ್ಯೂರು, ಮುಂಡೂರು ಮತ್ತು ಸರ್ವೆ ಗ್ರಾಮದ ಸುಮಾರು 500ಕ್ಕೂ ಅಧಿಕ ಭಕ್ತಾದಿಗಳಿಗೆ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯೂ ನಡೆಯಿತು.. ಉಪಾಹಾರ ಮತ್ತು ಅನ್ನಸಂತರ್ಪಣೆಗೆ ಗ್ರಾಮಸ್ಥರೇ ಉದಾರ ದೇಣಿಗೆ ಮತ್ತು ಹಸಿರು ಹೊರೆಕಾಣಿಕೆ ಅರ್ಪಿಸಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ..ಹೀಗೆ ಸರ್ವ ರೀತಿಯಲ್ಲೂ ದೇಗುಲದ ಈ ಮಹೋನ್ನತ ಕಾರ್ಯವು ಅದ್ದೂರಿಯಾಗಿ ಮೂಡಿಬಂದಿತು.