ಪುತ್ತೂರು: ರೋಟರಿ ಕ್ಲಬ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸಮಾಜದ ದುರ್ಬಲ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಅನೇಕ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ರೋಟರಿ ಝೋನಲ್ ಲೆಫ್ಟಿನೆಂಟ್ ಉಮೇಶ್ ನಾಯಕ್ ಅವರ ಪರಿಕಲ್ಪನೆಯ ‘ರೋಟರಿ ಯುವ ನ್ಯೂಸ್ ಚಾನೆಲ್’ ಅನ್ನು ಅನಾವರಣ ಮಾಡಿದ ಖ್ಯಾತ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಹೇಳಿದರು. ರೋಟರಿ ನ್ಯೂಸ್ ಚಾನೆಲ್ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಇದೊಂದು ವಿನೂತನ ಪ್ರಯೋಗ ಬಹುಶಃ ಕರ್ನಾಟಕ ಮಾತ್ರವಲ್ಲದೆ ಭಾರತದಲ್ಲಿಯೇ ರೋಟರಿ ಕ್ಲಬ್ ಇದರ ಪ್ರಪ್ರಥಮ ನ್ಯೂಸ್ ಚಾನೆಲ್ ಇದಾಗಿದೆ. ಪ್ರಾರಂಭಿಕ ಹಂತದಲ್ಲಿ ಪುತ್ತೂರಿನಲ್ಲಿರುವ ವಿವಿಧ ರೋಟರಿ ಸಂಸ್ಥೆಗಳ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಇದರಲ್ಲಿ ಪ್ರಸಾರ ಮಾಡಲಿದ್ದೇವೆ, ಮುಂದಿನ ಹಂತದಲ್ಲಿ ರೋಟರಿಯ ಸದಸ್ಯರ ಸಾಧನೆ ಗಳನ್ನು,ರೋಟರಿಗೆ ಸಂಬಂಧಿಸಿದ ಎಲ್ಲಾ ಸಮಾಚಾರಗಳನ್ನು ಇದರಲ್ಲಿ ಪ್ರಸಾರವಾಗಲಿದೆ ಎಂದು ರೋಟರಿ ಜೋನ್ ಕೊರ್ಡಿನೇಟರ್ ಡಾ. ಹರ್ಷ ಕುಮಾರ್ ರೈ ತಿಳಿಸಿದರು.
ಉಮೇಶ್ ನಾಯಕ್ ಹಾಗೂ ಹರ್ಷ ಕುಮಾರ ರೈ ರವರು ರೋಟರಿ ಯುವ ನ್ಯೂಸ್ ಚಾನೆಲ್ ನ ಆಡಳಿತ ನಿರ್ದೇಶಕರಾಗಿದ್ದು, ರೋಟರಿಯ ಪೂರ್ವ ಅಧ್ಯಕ್ಷ ವಿಶ್ವಾಸ್ ಶೆಣೈ ಇದರ ಗೌರವ ಸಲಹೆಗಾರರಾಗಿದ್ದಾರೆ. ಪಶುಪತಿ ಶರ್ಮಾ ಅವರು ಪ್ರಧಾನ ಸಂಪಾದಕರಾಗಿಯೂ, ನಾಗೇಂದ್ರ ರೈ ಪ್ರಸಾರ ವಿಭಾಗದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಚಾನೆಲ್ ಲೋಕಾರ್ಪಣೆ ಅಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಅನಾವರಣ ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ವೈದ್ಯರಾದ ರೋಟರಿ ಪೂರ್ವ ಜಿಲ್ಲಾ ಗವರ್ನರ್ ಡಾ. ದೇವದಾಸ ರೈ, ಯುವದ ಅಧ್ಯಕ್ಷ ಭರತ್ ಪೈ, ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ, ಕಾರ್ಯದರ್ಶಿ ದೇವಿಚರಣ್ ರೈ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.