ಕಾಸರಗೋಡು: ಮಲಗಿದ್ದ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಕೊಲೆಗೈದ ಪ್ರಕರಣ ಚಂದೇರದ ಪಿಲಿಕ್ಕೋಡು ಮಡಿವಯಲ್ ಎಂಬಲ್ಲಿ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಕೊಲೆಯಾದವರ ಪತ್ನಿ ಸೇರಿದಂತೆ ಮೂವರನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಡಿವಯಲ್ ನ ಕುಂಞಂಬು(66) ಕೊಲೆಗೀಡಾದವರು. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದವರ ಪತ್ನಿ ಜಾನಕಿ, ಸಂಬಂಧಿಕರಾದ ವಿ.ರಾಜೇಶ್ ಹಾಗೂ ಅನಿಲ್ ಎಂಬಾತನನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿದ್ದ ಕುಂಞಂಬು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದ್ದರು. ಇವರ ಪರಿಪಾಲನೆ ಸಾಧ್ಯ ಇಲ್ಲ ಎಂಬ ಕಾರಣಕ್ಕೆ ಬುಧವಾರ ತಡರಾತ್ರಿ ಕೊಲೆ ನಡೆಸಿದ್ದಾರೆ. ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಪತ್ನಿಯನ್ನು ವಿಚಾರಿಸಿದಾಗ ಅವರ ಕುತ್ತಿಗೆಯಲ್ಲಿ ಗಾಯದ ಗುರುತು, ನೆಲದಲ್ಲಿ ಬಿದ್ದಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿರುವುದು ಕಂಡು ಬಂದಿತೆನ್ನಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದು, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಈ ನಡುವೆ ಕುಂಞಂಬು ಮನೆಗೆ ಬುಧವಾರ ರಾತ್ರಿ ಇಬ್ಬರು ಆಗಮಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಜಾನಕಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಅದರಂತೆ ಜಾನಕಿ ಹಾಗೂ ಇಬ್ಬರು ಸಂಬಂಧಿಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.