ಕಡಬ: ಜೆಸಿಬಿ ಖರೀದಿಸಿ ಕರಾರಿನಂತೆ ಹಣ ಪಾವತಿ ಮಾಡಿದರೂ ನನ್ನ ಒಪ್ಪಿಗೆ ಇಲ್ಲದೇ ಜೆಸಿಬಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು ಅಲ್ಲದೇ ಸುಳ್ಳು ಆರೋಪ ಹೊರಿಸಿ ಜೀವಬೆದರಿಕೆ ಒಡ್ಡಲಾಗಿದೆ ಎಂದು ರಾಮಕುಂಜ ನಿವಾಸಿ, ಗುತ್ತಿಗೆದಾರ ನೇಮಿರಾಜ್ ಎಂಬವರು ನೀಡಿದ ದೂರಿನ ಮೇರೆಗೆ ಬೆಂಗಳೂರು ನಿವಾಸಿ ಎಸ್.ಚಂದ್ರಶೇಖರ ಎಂಬವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಯಾಗಿರುವ ಎಸ್.ಚಂದ್ರಶೇಖರ ಎಂಬವರಿಗೆ ಸೇರಿದ ಕೆಎ 43 ಎನ್-1482 ನಂಬ್ರದ ಜೆಸಿಬಿಯನ್ನು ನೇಮಿರಾಜ್‌ರವರು ಜ.25ರಂದು ರೂ.25 ಲಕ್ಷಕ್ಕೆ ಖರೀದಿಸಿ ಈ ಪೈಕಿ ರೂ.5.80 ಲಕ್ಷವನ್ನು ನಗದು ರೂಪದಲ್ಲಿ ಪಾವತಿಸಿ ಉಳಿದ ರೂ.19.20 ಲಕ್ಷವನ್ನು ಚಂದ್ರಶೇಖರರವರು ಬೆಂಗಳೂರಿನ ಐಸಿಐಸಿಐ ಬ್ಯಾಂಕ್‌ನ ಬ್ರಾಂಚ್‌ನಿಂದ ಪಡೆದ ಸಾಲದ ಖಾತೆಗೆ ಕಾಲಕಾಲಕ್ಕೆ ಕಂತು ಕಟ್ಟುವ ಬಗ್ಗೆ ಪುತ್ತೂರಿನ ನೋಟರಿ ನ್ಯಾಯವಾದಿ ಜಗನ್ನಾಥರವರ ಸಮಕ್ಷಮದಲ್ಲಿ ಕರಾರು ಮಾಡಿಕೊಂಡಿದ್ದರು.
ಕರಾರಿನಂತೆ ನೇಮಿರಾಜ್‌ರವರು ಜ.28ರಂದು 55,600, ಫೆ.26ರಂದು 55 ಸಾವಿರ, ಮೇ 11ರಂದು 56 ಸಾವಿರ, ಜು.14ರಂದು ರೂ.55 ಸಾವಿರವನ್ನು ಚಂದ್ರಶೇಖರ್‌ರವರ ಐಸಿಐಸಿಐ ಬ್ಯಾಂಕ್‌ನ ಸಾಲದ ಖಾತೆಗೆ ನೆಫ್ಟ್ ಮೂಲಕ ಹಣ ಸಂದಾಯ ಮಾಡಿದ್ದರು. ಕರಾರು ಆದ 2 ದಿನಗಳ ಬಳಿಕ ಚಂದ್ರಶೇಖರ್‌ರವರು ತನ್ನನ್ನು ಸಂಪರ್ಕಿಸಿ ಬ್ಯಾಂಕ್ ಸಾಲದ ಹಿಂದಿನ 2 ಕಂತುಗಳು ಬಾಕಿ ಆಗಿರುತ್ತದೆ ಎಂದು ನಂಬಿಸಿದ್ದರಿಂದ ಅವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಜ.27 ರಂದು 3.40 ಲಕ್ಷ, ಫೆ.2ರಂದು 75 ಸಾವಿರ, ಎ.12ರಂದು 1.80ಲಕ್ಷ ರೂ. ನೆಫ್ಟ್ ಮೂಲಕ ಸಂದಾಯ ಮಾಡಿರುವುದಾಗಿ ನೇಮಿರಾಜ್‌ರವರು ದೂರಿನಲ್ಲಿ ತಿಳಿಸಿದ್ದಾರೆ.
ಚಂದ್ರಶೇಖರ್‌ರವರು ಜು.15ರಂದು ಹಳೆನೇರೆಂಕಿ ಗ್ರಾಮದ ಹಿರಿಂಜ ಎಂಬಲ್ಲಿಂದ ನನ್ನ ಒಪ್ಪಿಗೆ ಇಲ್ಲದೆ ಜೆಸಿಬಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ನಾನು ನೀಡಿದ ಹಣವನ್ನು ಐಸಿಐಸಿಐ ಬ್ಯಾಂಕ್‌ನ ಸಾಲದ ಕಂತು ಪಾವತಿಸದೆ ವಂಚನೆ ಮಾಡಲಾಗಿದೆ. ಇದೀಗ ಚಂದ್ರಶೇಖರ್‌ರವರು ತನ್ನ ತಪ್ಪು ಮರೆಮಾಚುವ ಉದ್ದೇಶದಿಂದ ನನ್ನ ವಿರುದ್ಧವೇ ಸುಳ್ಳು ಆರೋಪ ಹೊರಿಸಿ `ನಿನ್ನನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೇಮಿರಾಜ್‌ರವರು ಪುತ್ತೂರು 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ಸೂಚನೆಯಂತೆ ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ 406 420 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.