ಪುತ್ತೂರು: ಕೃಷಿ ಸಲಕರಣೆಗಳ ವ್ಯಾಪಾರ ಮಳಿಗೆಯೊಂದು ಮಾರಾಟ ಮತ್ತು ಸೇವೆ ಪರವಾನಗಿ ಪಡೆದು ಕೃಷಿ ಯಂತ್ರೋಪಕರಣಗಳ ರಿಪೇರಿ ಕೆಲಸ ಮಾಡಿ ಶಬ್ದ ಮಾಲಿನ್ಯ ಮಾಡುತ್ತಿರುವುದಾಗಿ ಆರೋಪಿಸಿ ನೀಡಿದ ದೂರಿನನ್ವಯ ಕೋರ್ಟ್ ಆದೇಶದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲ್ಲಿಕಟ್ಟೆಯ ಕಸ್ತೂರಿ ಬಾಳಿಗ ಅವರು ದೂರು ನೀಡಿದ್ದರು. ‘ಎಪಿಎಂಸಿ ರಸ್ತೆಯಲ್ಲಿರುವ ಕೃಷಿ ಸಲಕರಣೆಗಳ ವ್ಯಾಪಾರ ಮಳಿಗೆಗೆ ಮಾರಾಟ ಮತ್ತು ಸೇವೆಗಾಗಿ ಮಾತ್ರ ಪರವಾನಗಿ ನೀಡಲಾಗಿದ್ದರೂ ಅವರು ಕೃಷಿ ಯಂತ್ರೋಪಕರಣಗಳ ರಿಪೇರಿ ಕೆಲಸಗಳನ್ನು ನಡೆಸುತ್ತಿದ್ದು ಇದರಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ.ಸ್ಥಳೀಯ ನಿವಾಸಿಗಳಿಗೆ, ವೃದ್ಧರು, ವಿದ್ಯಾರ್ಥಿಗಳು, ಚಿಕ್ಕ ಮಕ್ಕಳಿಗೆ ಗಂಭೀರ ತೊಂದರೆ ಉಂಟಾಗುತ್ತಿರುವುದರಿಂದ ಶಾಂತಿಯುತ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.
ಇದೊಂದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ನ್ಯಾಯಾಲಯದ ಅನುಮತಿ ಪಡೆಯುವಂತೆ ದೂರುದಾರರಿಗೆ ಠಾಣೆಯಿಂದ ಹಿಂಬರಹ ನೀಡಲಾಗಿತ್ತು. ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ದೂರು ದಾಖಲು ಮಾಡಲಾಗಿದೆ.


























