ಶಿವಮೊಗ್ಗ: ಜಿಲ್ಲೆಯಲ್ಲಿ ಪುಷ್ಯ ಅಬ್ಬರಿಸುತ್ತಿದ್ದು, ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ನದಿಗಳು ಅಪಾಯದ ಮಟ್ಟಕ್ಕೆ ಸಮೀಪಿಸುತ್ತಿವೆ. ಇಡೀ ಮಲೆನಾಡಿಗೆ ಜಲದಿಗ್ಭಂಧನವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತುಂಗಾ, ಶರಾವತಿ, ವರದ, ಕುಮದ್ವತಿ, ಮಾಲತಿ ಮೊದಲಾದ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೃಷಿ ಜಮೀನು ಸಂಪೂರ್ಣ ಜಲಾವೃತವಾಗಿದ್ದು, ನೀರು ತಪ್ಪಿಸಲು ತಗ್ಗು ಪ್ರದೇಶದ ರೈತರು ಹರಸಾಹಸ ಮಾಡುವಂತಾಗಿದೆ. ತುಂಗಾ ನದಿ ಪಾತ್ರದಲ್ಲಿನ ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತವಾಗಿವೆ.
ಲಿಂಗನಮಕ್ಕಿಗೆ ದಾಖಲೆಯ 1,51,000 ಕ್ಯೂಸೆಕ್ ನೀರು ಬರುತ್ತಿದೆ. ಜಲಾಶಯದ ಮಟ್ಟ 1800 ಅಡಿಗೆ (ಗರಿಷ್ಠ ಮಟ್ಟ 1819 ಅಡಿ) ಸಮೀಪಿಸಿದ್ದು, ಕಳೆದ ಎರಡು ದಿನಗಳಲ್ಲಿ ಅತೀ ವೇಗವಾಗಿ ಜಲಾಶಯ ಭರ್ತಿಯಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ 140.20 ಮಿಮೀ ಮಳೆಯಾಗಿದೆ. ತುಂಗಾ ನದಿಯಲ್ಲಿಯೂ ಒಳಹರಿವು ಹೆಚ್ಚಾಗುತ್ತಲೇ ಇದ್ದು, ಶುಕ್ರವಾರ ಬೆಳಗ್ಗೆ 48,323 ಕ್ಯೂಸೆಕ್ ಹರಿದು ಬರುತ್ತಿದೆ.
ಭದ್ರಾಕ್ಕೆ 39,286 ಕ್ಯೂಸೆಕ್ ನೀರು ಬರುತ್ತಿದ್ದು, ಜಲಾಶಯದ ಮಟ್ಟ 171.1ಅಡಿ (ಗರಿಷ್ಠ 186 ಅಡಿ) ಬಂದಿದೆ. ಮಳೆ ಹೆಚ್ಚಿರುವುದರಿಂದ ಭದ್ರಾ ನಾಲೆಗಳಿಗೆ ಬಿಡುತ್ತಿದ್ದ ನೀರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭದ್ರಾ ಮೇಲ್ದಂಡೆ ನಾಲೆಗೂ ನೀರು ಕಡಿತ ಮಾಡಲಾಗಿದೆ.