ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಎಂ.ಎಫ್ ಸಂಸ್ಥೆಯಿಂದ ಸರಬರಾಜಾಗುವ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳು ಲಿಪಿಯ ವರ್ಣಮಾಲೆ ಮುದ್ರಿಸಿ ಹಂಚುವಂತೆ ಶಾಸಕ ವೇದವ್ಯಾಸ್ ಕಾಮತ್ ದಕ್ಷಿಣ ಕನ್ನಡ ಹಾಲು ಉತ್ಪಾದಕ ಸಂಸ್ಥೆಯ ಅಧ್ಯಕ್ಷರಿಗೆ ಹಾಗೂ ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶಾಸಕ ಕಾಮತ್, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮಾತನಾಡುವ ತುಳುಭಾಷೆಗೆ ಐತಿಹಾಸಿಕ ಹಿನ್ನೆಲೆಯಿದೆ. ಅನೇಕ ಶಾಸನಗಳಲ್ಲಿ ತುಳುಲಿಪಿ ಕಂಡು ಬಂದಿದೆ.ಭಾಷೆಯ ಉಳಿವು ಅದನ್ನು ಬಳಸಿದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಕೆ.ಎಂ.ಎಫ್ ಸಂಸ್ಥೆಯ ಉತ್ಪನ್ನಗಳ ಪೊಟ್ಟಣಗಳ ಮೇಲೆ ತುಳುಲಿಪಿಯ ವರ್ಣಮಾಲೆಯ ಬಳಕೆಗೆ ಈಗಾಗಲೇ ಅಧ್ಯಕ್ಷರಿಗೆ ಮತ್ತು ವ್ಯವಸ್ಥಾಪನಾ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ.
ಮುಂದಿನ ದಿನಗಳಲ್ಲಿ ಸಹಕಾರಿ ಸಚಿವರಿಗೂ ಇದರ ಕುರಿತು ಮಾಹಿತಿ ನೀಡಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.