ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ, ಕ್ರೀಡಾಪಟುಗಳ ದ್ರೋಣಾಚಾರ‍್ಯರೆಂದೇ ಪ್ರಸಿದ್ಧಿ ಪಡೆದಿರುವ ಮೇಜರ್ ವೆಂಕಟ್ರಾಮಯ್ಯ(88ವ.)ರವರು ಅನಾರೋಗ್ಯದಿಂದ ಜು.25 ರಂದು ಅಪರಾಹ್ನ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಶಿಕ್ಷಣ ಶಿಲ್ಪಿ ಮೊ|ಪತ್ರಾವೋರವರು ಪುತ್ತೂರಿನಲ್ಲಿ ಅಂದು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಸಂದರ್ಭದಲ್ಲಿ 1958ರಲ್ಲಿ ದರ್ಬೆ ಎಂಬಲ್ಲಿ ಸಂತ ಫಿಲೋಮಿನಾ ಕಾಲೇಜನ್ನು ಆರಂಭಿಸಿದಾಗ ಮೇಜರ್ ವೆಂಕಟ್ರಾಮಯ್ಯರವರು ಕಾಲೇಜಿನ ಪ್ರಪ್ರಥಮ ದೈಹಿಕ ಶಿಕ್ಷಣ ನಿರ್ದೇಶಕರು ಎಂಬ ಹೆಸರನ್ನು ಪಡೆದಿದ್ದರು. ಅಲ್ಲಿಂದ 1992ರ ತನಕ ಅಂದರೆ ಸುಮಾರು 34 ವರ್ಷಗಳ ಕಾಲ ನಿರಂತರ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದರು. ಮತ್ತೊಂದು ವಿಶೇಷವೆಂದರೆ ಮೇಜರ್ ವೆಂಕಟ್ರಾಮಯ್ಯರವರ ಹೆಸರಿನ ಮುಂದೆ ‘ಮೇಜರ್’ ಎಂಬ ಹೆಸರು ಬರಲು ಅವರೋರ್ವ ಎನ್‌ಸಿಸಿ ಅಧಿಕಾರಿ ಎಂಬುದಾಗಿಯೂ ಪ್ರಸಿದ್ಧಿ ಪಡೆದಿದ್ದರು. ಅಂದಿನ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಡಿಪ್ಲೋಮಾ ಇನ್ ಫಿಸಿಕಲ್ ಎಜ್ಯುಕೇಶನ್ ಇಲ್ಲಿ ಶಿಕ್ಷಣವನ್ನು ಪಡೆದು ಫಿಲೋಮಿನಾ ಕಾಲೇಜಿನಲ್ಲಿ ಮೊದಲಾಗಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಮೇಜರ್ ವೆಂಕಟ್ರಾಮಯ್ಯರವರು ಸೇವೆಯನ್ನು ಆರಂಭಿಸಿದ್ದರು.
ಮೇಜರ್ ವೆಂಕಟ್ರಾಮಯ್ಯರವರು ಫಿಲೋಮಿನಾ ಕಾಲೇಜಿನ ಮೊದಲ ಪ್ರಾಂಶುಪಾಲ, ವಂ|ಸೆರಾವೋ, ಬಳಿಕ ಪ್ರಾಂಶುಪಾಲರಾದ ವಂ|ಕ್ಯಾಸ್ಟಲಿನೋ, ವಂ|ಜೆ.ಬಿ ಡಿ’ಸೋಜರವರ ಮುಂದಾಳತ್ವದಲ್ಲಿ ದುಡಿದಿದ್ದರು. ಅಲ್ಲದೆ ಅವರು ತಮ್ಮ ಮನೆಯಲ್ಲಿಯೇ ಹಲವಾರು ಮಂದಿ ವಿದ್ಯಾರ್ಥಿಗಳನ್ನು ಕಲಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ದೇವಸ್ಥಾನಗಳ ಅಭಿವೃದ್ಧಿಗೆ ಮೇಜರ್ ವೆಂಕಟ್ರಾಮಯ್ಯರವರು ದೇಣಿಗೆಯನ್ನು ನೀಡುತ್ತಿರುವುದಲ್ಲದೆ ಇತ್ತೀಚೆಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ರಾಷ್ಟ್ರೀಯ ಅಥ್ಲೀಟ್ ಪಿ.ಟಿ ಉಷಾರವರ ಸ್ಪೋರ್ಟ್ಸ್ ಅಕಾಡೆಮಿಗೆ ರೂ.೨ ಲಕ್ಷ ದೇಣಿಗೆಯನ್ನು ನೀಡಿದ್ದರು.
ದ್ರೋಣಾಚಾರ‍್ಯ ಪ್ರಶಸ್ತಿಯನ್ನು ನಿರಾಕರಿಸಿದ್ದರು:
ಮೇಜರ್ ವೆಂಕಟ್ರಾಮಯ್ಯರವರದ್ದು ವಿಶೇಷ ಸ್ವಭಾವ. ಕ್ರೀಡಾಪಟುಗಳನ್ನು ತಯಾರಿಸುವುದು, ಅವರನ್ನು ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡುವುದೇ ಅವರ ಮುಂದೆ ಇದ್ದಂತಹ ಗುರಿ. ಮೇಜರ್ ವೆಂಕಟ್ರಾಮಯರವರ ಗರಡಿಯಲ್ಲಿ ಅಂದು ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಎನ್‌ಎಂಸಿ ಸುಳ್ಯದಲ್ಲಿ ನಡೆದಂತಹ ಅಂತರ್-ಕಾಲೇಜು ವೈಟ್‌ಲಿಪ್ಟಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯು ಫಿಲೋಮಿನಾ ಕಾಲೇಜಿಗೆ ಒಲಿದು ಬಂದಿತ್ತು. ಕ್ರೀಡಾಕ್ಷೇತ್ರದಲ್ಲಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದ ರೀತಿಯನ್ನು ಗಮನಿಸಿ ಸರಕಾರದಿಂದ ರಾಜ್ಯಮಟ್ಟದ ಪ್ರತಿಷ್ಠಿತ ದ್ರೋಣಾಚಾರ‍್ಯ ಪ್ರಶಸ್ತಿಯನ್ನು ಮೇಜರ್ ವೆಂಕಟ್ರಾಮಯ್ಯರವರಿಗೆ ನೀಡುವುದೆಂದು ಹೆಸರನ್ನು ಪ್ರಕಟಿಸಿದಾಗ ಮೇಜರ್ ವೆಂಕಟ್ರಾಮಯ್ಯರವರು ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮಕ್ಕೆ ಹಾಜರಾಗದೆ ನಯವಾಗಿಯೇ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಪ್ರಶಸ್ತಿ ಮುಖ್ಯವಲ್ಲ, ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಬಾಚಿದಾಗ ಅದೇ ನನಗೆ ಸಿಗುವ ಪ್ರಶಸ್ತಿ ಎಂದು ಮೇಜರ್ ವೆಂಕಟ್ರಮಯ್ಯರವರು ಹೇಳುತ್ತಿದ್ದರು.
ಹುಟ್ಟೂರು ಸಂಪಾಜೆ:
ಮೃತ ಮೇಜರ್ ವೆಂಕಟ್ರಾಮಯ್ಯರವರು ಸಂಪಾಜೆ ನಿವಾಸಿ ಗೋಪಾಲಕೃಷ್ಣ ಹಾಗೂ ದೇವಕಿಯಮ್ಮ ದಂಪತಿ ಮೂರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ್ದರು. ತಮ್ಮ ಜೀವನದ ಹೆಚ್ಚಿನ ವರ್ಷಗಳನ್ನು ಪುತ್ತೂರಿನ ಮಯೂರ ಚಿತ್ರಮಂದಿರದ ಬಳಿ ಇರುವ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಮಾತ್ರವಲ್ಲದೆ ತಮ್ಮ ಕರ್ತವ್ಯದ ಸಂದರ್ಭದಲ್ಲೂ ಬೈಸಿಕಲ್‌ನಲ್ಲಿ ಮತ್ತು ಎನ್‌ಫೀಲ್ಡ್ ಬುಲೆಟ್ ಬೈಕಿನಲ್ಲಿ ಇದೇ ಮನೆಯಿಂದ ಆಗಮಿಸುತ್ತಿದ್ದರು. ಸೇವೆಯಿಂದ ನಿವೃತ್ತಿ ಹೊಂದಿದ ಬಳಿಕ ಮೇಜರ್ ವೆಂಕಟ್ರಾಮಯ್ಯರವರು ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಹುಟ್ಟೂರು ಸಂಪಾಜೆಯಲ್ಲಿನ ಜೇಟ್ಲ ಎಂಬಲ್ಲಿ ವಾಸಿಸುತ್ತಿದ್ದರು.
ಕ್ರೀಡಾಪಟುಗಳ ಆಶಾಕಿರಣವಾಗಿದ್ದರು:
ಮೇಜರ್ ವೆಂಕಟ್ರಾಮಯ್ಯರವರದ್ದು ವೈಟ್‌ಲಿಪ್ಟಿಂಗ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಬಹಳಷ್ಟು ಆಸಕ್ತಿ ಹೊಂದಿರುವ ಕ್ಷೇತ್ರವಾಗಿತ್ತು. ಫಿಲೋಮಿನಾ ಕಾಲೇಜಿನಲ್ಲಿನ ತಮ್ಮ ವೃತ್ತಿ ಬದುಕಿನ ಸಂದರ್ಭದಲ್ಲಿ ನೂರಾರು ಕ್ರೀಡಾಪಟುಗಳನ್ನು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡುವ ಮೂಲಕ ಕ್ರೀಡಾಪಟು ವಿದ್ಯಾರ್ಥಿಗಳ ಬದುಕಿಗೆ ನಿಜವಾಗಿಯೂ ಆಶಾಕಿರಣವಾಗಿದ್ದರು. ಪುತ್ತೂರಿನಲ್ಲಿ ವೈಟ್‌ಲಿಪ್ಟಿಂಗ್ ಅನ್ನು ಪ್ರಥಮವಾಗಿ ಪರಿಚಯಿಸಿದ ಕೀರ್ತಿ ಮೇಜರ್ ವೆಂಕಟ್ರಾಮಯ್ಯರವದ್ದಾಗಿದೆ ಮಾತ್ರವಲ್ಲದೆ ವೈಟ್‌ಲಿಪ್ಟಿಂಗ್‌ನಲ್ಲಿ ಅಂದು ಯಂಗ್‌ಸ್ಟಾರ್ ಬಾರ್ಬೆಲ್ ಕ್ಲಬ್(ವೈಬಿಸಿ) ಸ್ಥಾಪಿಸಿ ಹಲವಾರು ವೈಟ್‌ಲಿಪ್ಟಿಂಗ್‌ಪಟುಗಳನ್ನು ಉದ್ಭವಿಸಿದ ಕೀರ್ತಿಯೂ ಪಡೆದಿದ್ದಾರೆ. ವೈಟ್‌ಲಿಪ್ಟಿಂಗ್‌ನಲ್ಲಿ ಪುಷ್ಪರಾಜ್ ಹೆಗ್ಡೆ, ಬ್ಯಾಪ್ಟಿಸ್ಟ್ ಲೋಬೋ, ಏಕಲವ್ಯ ಪ್ರಶಸ್ತಿ ವಿಜೇತ ಶ್ರೀಧರ್ ಗೌಡ, ರಮೇಶ್ ಫಾರೆಸ್ಟರ್, ಎಚ್.ಡಿ ಉಮೇಶ್, ಕೃಷ್ಣಪ್ಪ ಗೌಡ, ಎವೆರೆಸ್ಟ್ ರೊಡ್ರಿಗಸ್, ವೇಣುಗೋಪಾಲ್ ಕೃಷ್ಣ ನೋಂಡ, ಉದಯಕುಮಾರ್ ಸುಳ್ಯ, ಅಥ್ಲೆಟಿಕ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿ ಆಗಿರುವ ಡಾ|ಕಿಶೋರ್ ಕುಮಾರ್ ಸಿ.ಕೆ, ಚಂದ್ರಶೇಖರ್ ರೈ(ಎಲ್‌ಐಸಿ), ಮುತ್ತಪ್ಪ ಸಿ.ಎನ್, ಜೆರಿ ಲೂಯಿಸ್, ಗಣಪತಿ ನಾಯಕ್, ಸುನಿಲ್ ಶೆಟ್ಟಿ, ತಾರಾನಾಥ್ ಶೆಟ್ಟಿ, ಎಂ.ಎನ್ ಗಣಪತಿ, ವಿಜಯ್, ವಿಕ್ರಂ, ಸಂಜೀವ ಪುತ್ತೂರು, ಚಂದ್ರಶೇಖರ್ ರ‍್ಯ, ಸತೀಶ್ ರೈ, ವಿಲಿಯಂ ಡಿ’ಮೆಲ್ಲೋ, ಅನಿಲ್, ರವಿರಾಜ್ ಫಾರೆಸ್ಟರ್, ಪ್ರವೀಣ್ ಶೆಟ್ಟಿ ಎಸಿಎಫ್, ಡೋಲ್ಫಿ ರೇಗೋ, ಜೋನ್ ಪಾಸ್, ಪ್ರೇಮಲೀಲ ರೈ, ಚಂದ್ರಕಲಾ ಕೆ.ಪಿ ಇವರುಗಳು ಅಲ್ಲದೆ ಇನ್ನೂ ಅನೇಕ ಕ್ರೀಡಾಪಟುಗಳು ಮೇಜರ್ ವೆಂಕಟ್ರಾಮಯ್ಯರವರ ಗರಡಿಯಲ್ಲಿ ಪಳಗಿ ಉತ್ತಮ ಭವಿಷ್ಯವನ್ನು ಕಂಡಿರುತ್ತಾರೆ. ಎಲ್‌ಐಸಿಯ ಚಂದ್ರಶೇಖರ್ ರೈಯವರು ಇಂದೂ ಕೂಡ ಮೇಜರ್ ವೆಂಕಟ್ರಾಮಯ್ಯ ಅಥ್ಲೆಟಿಕ್ ಕ್ಲಬ್ ಅನ್ನು ಮೇಜರ್ ವೆಂಕಟ್ರಾಮಯ್ಯರವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.
ಮೇಜರ್ ವೆಂಕಟ್ರಾಮಯ್ಯರವರ ನಿಧನದ ಸುದ್ದಿ ತಿಳಿದೊಡನೆ ವೆಂಕಟ್ರಾಮಯ್ಯರವರು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿದ್ದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಂ|ಎಫ್.ಎಕ್ಸ್ ಗೋಮ್ಸ್ ಅಲ್ಲದೆ ಮಾಯಿದೆ ದೇವುಸ್ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಂ|ಆಂಟನಿ ಪ್ರಕಾಶ್ ಮೊಂತೇರೋ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎವರೆಸ್ಟ್ ರೊಡ್ರಿಗಸ್, ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ, ಫಿಲೋಮಿನಾ ಕಾಲೇಜು ಕ್ಯಾಂಟೀನಿನ ಆನಂದ ಶೆಟ್ಟಿ, ಏಕಲವ್ಯ ಪ್ರಶಸ್ತಿ ವಿಜೇತ ಶ್ರೀಧರ ಗೌಡ, ಎಲ್‌ಐಸಿಯ ಚಂದ್ರಶೇಖರ್ ರೈ, ದೇವದಾಸ್, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ಕ್ಲೋಡಿಯಸ್ ಡಿ’ಸೋಜ ಸಹಿತ ಹಲವರು ಮಹಾವೀರ ಆಸ್ಪತ್ರೆಗೆ ಆಗಮಿಸಿರುತ್ತಾರೆ.
ಹುಟ್ಟೂರಿನಲ್ಲಿ ಅಂತ್ಯಕ್ರಿಯೆ:
ಮೇಜರ್ ವೆಂಕಟ್ರಾಮಯ್ಯರವರ ಪಾರ್ಥಿವ ಶರೀರವನ್ನು ಮೇಜರ್ ವೆಂಕಟ್ರಾಮಯ್ಯರವರ ಸಹೋದರನ ಮಗನಾದ ರಾಜ್‌ಗೋಪಾಲ್‌ರವರ ಮಾರ್ಗದರ್ಶನದಂತೆ ಅದೇ ದಿನ ಸಂಜೆ ಹುಟ್ಟೂರಾದ ಸಂಪಾಜೆ ಜೇಟ್ಲ ಎಂಬಲ್ಲಿ ಮಹಾವೀರ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ದು ಕುಟುಂಬಿಕರ ಸಮ್ಮುಖದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ ಎಂದು ಮೃತ ಮೇಜರ್ ವೆಂಕಟ್ರಾಮಯ್ಯರವರ ಕುಟುಂಬ ಮೂಲಗಳು ತಿಳಿಸಿದೆ.
ಫಿಲೋಮಿನಾ ಕ್ರೀಡಾಂಗಣ ಮೇಜರ್ ವೆಂಕಟ್ರಾಮಯ್ಯರವರ ಕನಸಿನ ಕೂಸಾಗಿತ್ತು…
ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಮುಂಭಾಗದಲ್ಲಿ ವಿಶಾಲವಾದ ಕ್ರೀಡಾಂಗಣ ಇರುವುದು ಕಾಣ ಸಿಗಲಿಕ್ಕಿಲ್ಲ. ಆದರೆ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ೪೦೦ಮೀ.ಟ್ರ್ಯಾಕ್ ವಿಶಾಲವಾದ ಕ್ರೀಡಾಂಗಣವು ಇರುವುದಲ್ಲದೆ ಈ ಕ್ರೀಡಾಂಗಣವು ವಿದ್ಯಾಸಂಸ್ಥೆಯ ಮೆರುಗನ್ನು ಹೆಚ್ಚಿಸಿರುವುದು ನಿಜವಾಗಿರುವ ವಿಷಯವೇ. ಇದರ ಹಿಂದೆ ಮೇಜರ್ ವೆಂಕಟ್ರಾಮಯ್ಯರವರ ಬೆವರಿನ ಹನಿಯಿರುವುದು ಮಾತ್ರ ಸ್ಪಷ್ಟ. ಮೇಜರ್ ವೆಂಕಟ್ರಾಮಯ್ಯರವರು ತಮಗೆ ಸಿಕ್ಕಿದ ತಿಂಗಳ ಸಂಬಳವಾಗಲಿ ಅಥವಾ ನಿವೃತ್ತಿ ಸಂದರ್ಭದಲ್ಲಿ ಸಿಕ್ಕಿದ ಮೊತ್ತವಾಗಲಿ, ಇವೆಲ್ಲವನ್ನು ಗರಿಷ್ಟ ಮಾಪನದಲ್ಲಿ ಈ ಕ್ರೀಡಾಂಗಣಕ್ಕೆ ಸುರಿದು ಅಭಿವೃದ್ಧಿಪಡಿಸಿರುವುದು ಅಷ್ಟೇ ಸತ್ಯ. ಅಲ್ಲದೆ ಭವಿಷ್ಯದಲ್ಲಿ ಸಂಸ್ಥೆಗೆ ಉಪಯೋಗವಾಗಲಿ ಎಂದು ಇಂದು ಬೆಳೆದು ಫಲ ನೀಡುತ್ತಿರುವ ತೆಂಗಿನ ಮರಗಳನ್ನು ಅಂದು ಮೇಜರ್ ವೆಂಕಟ್ರಾಮಯ್ಯರವರು ಕ್ರೀಡಾಂಗಣದ ಸುತ್ತಲೂ ನೆಟ್ಟದ್ದಾಗಿದೆ.
.