ಮಂಗಳೂರು: ಮಹಿಳೆಯೊಬ್ಬರಿಗೆ ನಂಬಿಸಿ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ನಂತರ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ:
ಮಹಿಳೆಯೊಬ್ಬರು ತನ್ನ ಗಂಡನಿಗೆ ವಿಚ್ಛೇದನ ನೀಡಿದ ಬಳಿಕ ತಂದೆ-ತಾಯಿ ಜತೆ ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಪ್ರತ್ಯೇಕ ಮನೆ ಮಾಡುವ ಉದ್ದೇಶದಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದು, ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬುವರಿಂದ ಬಾಡಿಗೆ ಮನೆ ಪಡೆದಿದ್ದರು. ಇದಾದ ಬಳಿಕ ತನ್ನ ಬಟ್ಟೆಗಳನ್ನು ರೂಮ್ನಲ್ಲಿ ಇಟ್ಟು ಬಂದಿದ್ದು, ಮಹಿಳೆಗೆ ಜ್ವರ ಬಂದಿದ್ದ ಕಾರಣ ಬಾಡಿಗೆ ಮನೆಗೆ ತೆರಳಲಿಲ್ಲ. ಈ ಸಂದರ್ಭ ಆರೋಪಿ ಎಡೆಬಿಡದೆ ಫೋನ್ ಮಾಡಿ ‘ಬಟ್ಟೆಗಳನ್ನು ವಾಪಾಸ್ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾನೆ.
ನಿನ್ನ ಬಟ್ಟೆಗಳನ್ನು ಕುಂಟಿಕಾನ ಬಳಿ ತಂದು ನೀಡುವುದಾಗಿ ಜೂ.8ರಂದು ಹೇಳಿದ್ದ ಆರೋಪಿ, ಅಲ್ಲಿಗೆ ಕಾರಿನಲ್ಲಿ ಬಂದಿದ್ದಾನೆ. ಬಟ್ಟೆ ತರಲು ಮಹಿಳೆ ಹೋದಾಗ ‘ಬಟ್ಟೆ ಬಿಟ್ಟು ಬಂದಿದ್ದೇನೆ, ನೀನು ಬಂದು ತೆಗೆದುಕೊಂಡು ಹೋಗು’ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ಮನೆಗೆ ತೆರಳುವ ಒಳರಸ್ತೆಗೆ ಕಾರನ್ನು ಚಲಾಯಿಸಿ ಜನಸಂಚಾರವಿಲ್ಲದ ಜಾಗದಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆ ದೂರಿದ್ದಾರೆ. ಇದಾದ ಕೆಲ ದಿನಗಳ ನಂತರ ಆರೋಪಿ ಮಹಿಳೆಗೆ ಕರೆ ಮಾಡಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕೆ ಮಹಿಳೆ ನಿರಾಕರಿಸಿದಾಗ ‘ಮದುವೆಯಾಗದಿದ್ದಲ್ಲಿ ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.