ಪುತ್ತೂರು: ಕಳೆದ 25 ವರ್ಷಗಳಿಂದ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿರುವ ರಸ್ತೆಯಿಂದ ವಂಚಿತರಾಗಿದ್ದ ಇರ್ದೆ ಗ್ರಾಮದ ಕುಂಞಿಮೂಲೆಯ 12 ಕುಟುಂಬಗಳ ಮನೆಗಳಿಗೆ ತೆರಳಲು ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಶೋಕ್ ನಾಯ್ಕ ಅವರ ಮುಂದಾಳತ್ವದಲ್ಲಿ ರಸ್ತೆ ಸೌಲಭ್ಯವನ್ನು ನಿರ್ಮಿಸಿಕೊಡುವಲ್ಲಿ ಸಫಲವಾಗಿದೆ.
ಇರ್ದೆ ಗ್ರಾಮದ ಕುಂಞಮೂಲೆ ಪರಿಶಿಷ್ಟ ಪಂಗಡದ ನಾರಾಯಣ ನಾಯ್ಕ ಕುಟುಂಬ ಮತ್ತು ಅವರ ಜಾಗಕ್ಕೆ ಹೊಂದಿಕೊಂಡಂತಿದ್ದ 12 ಕುಟುಂಬಗಳ ಮನೆಗಳಿಗೆ ತೆರಳುವ ರಸ್ತೆಯನ್ನು 25 ವರ್ಷಗಳ ಹಿಂದೆ ಸ್ಥಳೀಯ ನಿವಾಸಿಯೋರ್ವರು ಬಂದ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಈ ಕುರಿತು ಆ ಕುಟುಂಬಗಳು ಕೆಲ ಸಮಯಗಳ ಹಿಂದೆ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಗಮನಕ್ಕೆ ತಂದು ನ್ಯಾಯ ಒದಗಿಸುವಂತೆ ವಿನಂತಿಸಿದ್ದರು. ಸಮಿತಿಯ ಮೂಲಕ ಪ್ರಾರಂಭದಲ್ಲಿ ಮಾತುಕತೆಯ ಮೂಲಕ ಪ್ರಯತ್ನಿಸಲಾಗಿದ್ದರೂ ಅದಕ್ಕೆ ಖಾಸಗಿ ಜಮೀನಿನವರು ಒಪ್ಪಿಗೆ ಸೂಚಿಸಿಲ್ಲ. ಹೀಗಾಗಿ ಕಾನೂನು ರೀತಿಯಲ್ಲಿ ಹೋರಾಟ ನಡೆಸಿ ರಸ್ತೆ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯು ಯಶಸ್ವಿಯಾಗಿದೆ. ಈಗ ಸುಮಾರು ಒಂದು ಕೀ.ಮೀ ದೂರದ ಕಚ್ಚಾ ರಸ್ತೆಯನ್ನು ನಿರ್ಮಿಸಿಕೊಡುವಲ್ಲಿ ಸಮಿತಿಯು ಸಫಲವಾಗಿದೆ ಎಂದು ಸಮಿತಿಯವರು ಮಾಹಿತಿ ನೀಡಿದ್ದಾರೆ.
ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಸದಸ್ಯರಾದ ರವಿಪ್ರಸಾದ್ ಪೆರುವಾಯಿ, ಸಾವಿತ್ರಿನಾಯ್ಕ, ಸಂಚಾಲಕರಾದ ಶ್ರೀಧರ್ ನಾಯ್ಕ, ಜ್ಯೋತಿ ಅಶೋಕ್ ನಾಯ್ಕ, ಚೈತ್ರ ನಾಯ್ಕ, ಮೋಹನ್ ನಾಯ್ಕ, ಅಶೋಕ್ ನಾಯ್ಕ ಕುಂಬ್ರ, ಗಿರೀಶ್ ನಿಡ್ಪಳ್ಳಿ, ಲಕ್ಷ್ಮಣ ನಿಡ್ಪಳ್ಳಿ, ಶೋಭಾ ನಾಯ್ಕ, ಸೇಸಪ್ಪ ನಾಯ್ಕ ಅಡ್ಯನಡ್ಕ, ತಿರುಮಲೇಶ್ವರ ನಾಯ್ಕ, ಆನಂದ ನಾಯ್ಕ, ವಿಮಲ ನಾಯ್ಕ ದೈತೋಟ, ಗೀತಾ ನಾಯ್ಕ, ಸುಚೇತ ನಾಯ್ಕ್ ಪ್ರಮೋದ್ ನಾಯ್ಕ್ ಹಾಗೂ ಸುಜಾತರವರು ರಸ್ತೆ ನಿರ್ಮಿಸುವಲ್ಲಿ ಸಹಕರಿಸಿರುತ್ತಾರೆ.
ಕಳೆದ ಹಲವು ವರ್ಷಗಳಿಂದ ರಸ್ತೆಯಿಲ್ಲದೆ ತೀರಾ ಸಂಕಷ್ಟ ಎದುರಿಸುತ್ತಿದ್ದೇವು. ಇದಕ್ಕಾಗಿ ನ್ಯಾಯಾಲಯಕ್ಕೂ ಅಲೆದಾಡಬೇಕಾಗಿತ್ತು. ಈಗ ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯವರು ಹೋರಾಟ ಮಾಡಿ ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ – ನಾರಾಯಣ ನಾಯ್ಕ