ಬಂಟ್ವಾಳ: ಪೈಪ್ ಲೈನ್ ಕೊರೆದು ಡೀಸೆಲ್ ಕಳವು ಮಾಡುವ ಪ್ರಕರಣ ಸೋರ್ನಾಡು ಎಂಬಲ್ಲಿ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಎಂ.ಆರ್.ಪಿ.ಎಲ್.ಕಂಪೆನಿಗೆ ಸೇರಿದ ಪೈಪ್ ಲೈನ್ ಕೊರೆದು ಡೀಸೆಲ್ ಕಳ್ಳತನ ಮಾಡುತ್ತಿದ್ದ ಘಟನೆ ಬಗ್ಗೆ ಬೆಳಕಿಗೆ ಬಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ತನಿಖೆ ಆರಂಭವಾಗಿದೆ.

ಈ ಬಗ್ಗೆ ಸುಳಿವು ಸಿಕ್ಕಿದ ಕೂಡಲೇ ಆರೋಪಿ ಐವನ್ ಮನೆ ಬಿಟ್ಟು ಪರಾರಿಯಾಗಿದ್ದು ಪೋಲೀಸರು ಆತನಿಗಾಗಿ ಹುಡುಕಲು ಆರಂಭಿಸಿದ್ದಾರೆ. ಅರಳ ಗ್ರಾಮದ ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿ ಐವನ್ ಎಂಬವರಿಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಹಾದು ಹೋಗಿರುವ ಪೈಪ್ ಲೈನ್ ನ್ನು ಕೊರೆದು ಡೀಸೆಲ್ ಕಳವು ಮಾಡುತ್ತಿದ್ದರು.

ಮಂಗಳೂರು ಎಂಆರ್.ಪಿ.ಎಲ್.ಕಂಪೆನಿಯಿಂದ ಹಾಸನಕ್ಕೆ ಪೈಪ್ ಲೈನ್ ಮುಖಾಂತರ ಸಾಗಾಟ ವಾಗುವ ಡಿಸೇಲ್ ನ್ನು ಕಳವು ಮಾಡಲಾಗಿದೆ. ಐವನ್ ಅವರ ರಸ್ತೆಯಲ್ಲಿ ಸುಮಾರು 20 ಅಡಿ ಆಳದಲ್ಲಿ ಹಾದುಹೋಗುವ ಡೀಸೆಲ್ ಪೈಪ್ ಲೈನ್ ನ್ನು ಅಗೆದು ಬಳಿಕ ಪೈಪ್ ಲೈನ್ ಕೊರೆದು ಆ ಪೈಪ್ ಗೆ ಇನ್ನೊಂದು ಪೈಪ್ ಅಳವಡಿಸಿ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಗೇಟ್ ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ವಾಹನಕ್ಕೆ ಡೀಸೆಲ್ ತುಂಬಿಸಿ ಆ ಬಳಿಕ ಮಾರಾಟ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಕಂಪೆನಿಯಲ್ಲಿ ಕೆಲ ದಿನಗಳಿಂದ ಪೈಪ್ ಲೈನ್ ನಲ್ಲಿ ಡಿಸೇಲ್ ನ ಅಳತೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು ಸ್ವತಃ ಕಂಪೆನಿಯವರು ಮಂಗಳೂರು ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ಕಂಪೆನಿ ಈ ಬಗ್ಗೆ ಕಂಪೆನಿಯ ತಂತ್ರಜ್ಞಾನ ಯಂತ್ರದಲ್ಲಿ ಪರಿಶೀಲನೆ ನಡೆಸಿದಾಗ ಇಲ್ಲಿ ಸೋರಿಕೆ ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಕಂಪೆನಿಯವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ಪೋಲೀಸರ ಸಮಕ್ಷಮದಲ್ಲಿ ಐವನ್ ಅವರ ರಸ್ತೆಯನ್ನು ಜೆ.ಸಿಬಿ.ಮೂಲಕ ಅಗೆಯುವ ಕಾರ್ಯ ಮಾಡಿದ್ದಾರೆ. ರಸ್ತೆಯನ್ನು ಅಗೆದಾಗ ಕಂಪೆನಿ ಪೈಪ್ ಲೈನ್ ಕೊರೆದು ಇವರು ಡೀಸೆಲ್ ಕಳವು ಮಾಡುತ್ತಿದ್ದ ಬಗ್ಗೆ ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಸ್ಥಳದಲ್ಲಿದ್ದು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ಧಾರೆ.


