ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಪಿಸಿ ವಿನೋದ್ ನಾಯ್ಕ್ ಹಾಗೂ ಹೋಮ್ ಗಾರ್ಡ್ ಜಯಗಣೇಶ್ ಅವರು ತಮ್ಮ ಸಮಯೋಚಿತ ಕಾರ್ಯಾಚರಣೆಯ ಮೂಲಕ ಎದೆನೋವಿನಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಜೂನ್ 11ರಂದು ಮಧ್ಯರಾತ್ರಿ ವೇಳೆ ಬಂಟ್ವಾಳ ಗೂಡಿನಬಳಿ ಪ್ರದೇಶದಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನಿಂದ ಕುಸಿದು ಅಸ್ವಸ್ಥಗೊಂಡಿರುವ ಮಾಹಿತಿ ದೊರಕಿತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಪಿಸಿ ವಿನೋದ್ ನಾಯ್ಕ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾಗಿರುವ CPR ಪ್ರಕ್ರಿಯೆಯನ್ನು ನೆರವೇರಿಸಿದರು.
ಅವರ ತಕ್ಷಣದ ಸ್ಪಂದನೆ ಹಾಗೂ ಸಮರ್ಪಕ ವೈದ್ಯಕೀಯ ನೆರವಿನಿಂದ ಅಸ್ವಸ್ಥ ವ್ಯಕ್ತಿಯು ಪ್ರಾಣಾಪಾಯದಿಂದ ಪಾರಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ಸಿಪಿಸಿ ವಿನೋದ್ ನಾಯ್ಕ್ ಹಾಗೂ ಹೋಮ್ ಗಾರ್ಡ್ ಜಯಗಣೇಶ್ ಅವರ ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ಈ ಕಾರ್ಯ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಜನಸ್ನೇಹಿ ಸೇವೆಯ ಪ್ರತೀಕವಾಗಿ ಮೂಡಿಬಂದಿದೆ.


























