ಉಪ್ಪಿನಂಗಡಿ: ಇಲ್ಲಿನ ಕೂಟೇಲು ಸಮೀಪ ಜೂನ್ 1ರಂದು ಸಂಭವಿಸಿದ್ದ ಲಾರಿ-ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಗಳೂರು ಮರೋಳಿ ನಿವಾಸಿ ಭಾರತಿ (48) ಅವರು ಚಿಕಿತ್ಸೆ ಫಲಕಾರಿಯಾಗದೆ ಜೂನ್ 13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ವ್ಯಾಗ್ನರ್ ಕಾರಿಗೆ, ವಿರುದ್ಧ ದಿಕ್ಕಿನಿಂದ ಏಕಮುಖ ರಸ್ತೆಗೆ ಪ್ರವೇಶಿಸಿದ್ದ ಅನಿಲ ಸಾಗಾಟದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಕಾರು ಚಾಲಕ ದೀಪಕ್ ಹಾಗೂ ಪ್ರಯಾಣಿಕರಾದ ಗುರುರಾಜ್, ಧನುಷ್, ಗೀತಾ ಮತ್ತು ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಭಾರತಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ದೀಪಕ್ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಗುರುರಾಜ್, ಧನುಷ್ ಹಾಗೂ ಗೀತಾ ಚಿಕಿತ್ಸೆ ಬಳಿಕ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.


























