ವಾಷಿಂಗ್ಟನ್: ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯನ್ನಾಗಿ ಭಾರತ-ಅಮೇರಿಕನ್ ವಕೀಲ ರಶದ್ ಹುಸೇನ್ ಅವರನ್ನು ಅಮೇರಿಕಾ ನೇಮಕ ಮಾಡಿದೆ.
ಶ್ವೇತಭವನದ ಪ್ರಕಾರ, ರಶದ್ ಹುಸೇನ್ ಅವರು ಈ ಪ್ರಮುಖ ಸ್ಥಾನಕ್ಕೆ ನೇಮಕಗೊಂಡಿರುವ ಮೊದಲ ಮುಸ್ಲಿಂ ವ್ಯಕ್ತಿಯಾಗಿದ್ದಾರೆ. ರಶದ್ ಹುಸೇನ್ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಸಹಭಾಗಿತ್ವ ಹಾಗೂ ಜಾಗತಿಕ ಪಾಲ್ಗೊಳ್ಳುವಿಕೆ ವಿಭಾಗದ ನಿರ್ದೇಶಕರಾಗಿದ್ದಾರೆ.
ಈ ಹಿಂದೆ ನ್ಯಾಯಾಂಗ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿ ಹಿರಿಯ ಸಲಹೆಗಾರರಾಗಿ ಹುಸೇನ್ ಅವರು ಸೇವೆ ಸಲ್ಲಿಸಿದ್ದರು. ಒಬಾಮಾ ಅವರ ಆಡಳಿತ ಅವಧಿಯಲ್ಲಿ ಹುಸೇನ್ ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯ ಅಮೇರಿಕಾದ ವಿಶೇಷ ರಾಯಭಾರಿಯಾಗಿ ಹಾಗೂ ಕಾರ್ಯತಂತ್ರದ ಭಯೋತ್ಪಾದನಾ ನಿಗ್ರಹ ಸಂವಹನಕ್ಕಾಗಿ ಅಮೇರಿಕಾದ ವಿಶೇಷ ರಾಯಭಾರಿಯಾಗಿ ಹಾಗೂ ವೈಟ್ ಹೌಸ್ ಕೌನ್ಸಿಲ್‌ನ ಉಪ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಹುಸೇನ್ ಅವರು ರಾಯಭಾರಿಯಾಗಿ, ವಿಶ್ವಸಂಸ್ಥೆ, ವಿದೇಶಿ ಸರ್ಕಾರಗಳು ಹಾಗೂ ನಾಗರಿಕ ಸಮಾಜದ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಶಿಕ್ಷಣ, ಉದ್ಯಮಶೀಲತೆ, ಆರೋಗ್ಯ, ಅಂತರಾಷ್ಟ್ರೀಯ ಭದ್ರತೆ, ವಿಜ್ಞಾನ, ಇಸ್ಲಾಮಿಕ್ ಸಹಕರ ಸಂಘಟನೆ ಹಾಗೂ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳ ಪಾಲುದಾರಿಕೆಯನ್ನು ವಿಸ್ತರಿಸಲು ಕೆಲಸ ಮಾಡಿದ್ದಾರೆ.